ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಉದ್ಘಾಟಿಸಿದರು. ಶ್ರೀ ರಂಭಾಪುರಿ ಜಗದ್ಗುರುಗಳು, ಶ್ರೀನಿವಾಸ್, ವೆಂಕಟೇಶ್, ಪೂರ್ಣೇಶ್, ಯಜ್ಞಪುರುಷ ಭಟ್, ಸುರೇಶ್ ಭಟ್ ಇತರರಿದ್ದರು.  
ನ್ಯೂಸ್

ಸಹಿಷ್ಣುತೆಯಿಂದ ಬದುಕಿದರೆ ನಾಡು ಸುಭದ್ರ

ಬಾಳೆಹೊನ್ನೂರು: ಹಿಂದು ಧರ್ಮ ಇಂದೂ ಇದೆ. ಮುಂದೆಯೂ ಇರಲಿದೆ. ಸನಾತನ ಧರ್ಮವನ್ನು ನಾಶ ಮಾಡುವ ಶಕ್ತಿ ಯಾರಿಗೂ ಇಲ್ಲ. ಧರ್ಮವನ್ನು ನಾಶ ಮಾಡಲು ಹೊರಟರೆ ಅವರಿಗೆ ಉಳಿಗಾಲವಿಲ್ಲ ಎಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಂಭಾಪುರಿ ಪೀಠದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಬಿ.ಎಸ್.ವಿಠ್ಠಲ ರಾವ್ ದತ್ತಿ ಹಾಗೂ ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣ. ಇದನ್ನು ಅರ್ಥ ಮಾಡಿಕೊಂಡು ಪರಸ್ಪರ ಸ್ವಾಭಿಮಾನ, ಸಹಿಷ್ಣುತೆಯಿಂದ ಬದುಕಿದರೆ ಮಾತ್ರ ಉತ್ತಮ ನಾಡು ಕಟ್ಟಲು ಸಾಧ್ಯ. ಹಿಂದು ಸಂಸ್ಕೃತಿ, ಸಂಪ್ರದಾಯ ಯಾರನ್ನೂ ದೂರವಿಟ್ಟಿಲ್ಲ. ತನ್ನ ತೋಳ ತೆಕ್ಕೆಯಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಿದೆ ಎಂದರು.
ಸುಳ್ಳಿನ ಜತೆ ದುಷ್ಟ ಶಕ್ತಿಗಳು ಇರುತ್ತವೆ. ಆದರೆ ಸತ್ಯದ ಜತೆಗೆ ದೈವ ಶಕ್ತಿ ಎಂದಿಗೂ ಇರುತ್ತದೆ. ಕ್ರಿಯಾಶೀಲವಾಗಿ ಬದುಕಿದ ಆದರ್ಶ ವ್ಯಕ್ತಿಗಳ ಚಿಂತನೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಇಂದಿನ ವೈಚಾರಿಕ ಯುಗದಲ್ಲಿ ನಾವು ಪ್ರಾಚೀನ ಸಾಹಿತ್ಯ, ಸಂಸ್ಕೃತಿಯನ್ನು ಮರೆಯುತ್ತಿದ್ದಾನೆ. ಇದರಿಂದಲೇ ಮನುಷ್ಯ ಹಲವು ಸಂಕಷ್ಟಗಳಿಗೆ ಗುರಿಯಾಗುತ್ತಿದ್ದಾನೆ. ಹಳೆಯ ಸಂಸ್ಕೃತಿಗಳೊಂದಿಗೆ ಹೊಸ ಚಿಂತನೆಯನ್ನು ಅಳವಡಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಶ್ರೇಯಸ್ಸು ಸಾಧ್ಯ ಎಂದು ಹೇಳಿದರು.
ದತ್ತಪೀಠದ ಹೋರಾಟಗಾರ ಬಿ.ಎಸ್.ವಿಠ್ಠಲ ರಾವ್ ಅವರು ಭಾರತೀಯ ಸಂಸ್ಕೃತಿ, ಆದರ್ಶ, ಪರಂಪರೆಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಸಮಾಜದ ಓರ್ವ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕಾರ್ಯವನ್ನು ತಮ್ಮ ಬದುಕಿನಲ್ಲಿ ಮಾಡಿದ್ದಾರೆ. ಅವರು ಮಾಡಿದ ಕಾರ್ಯಗಳು ಜನರ ಮನದಲ್ಲಿ ಸದಾ ಹಸಿರಾಗಿವೆ ಎಂದರು.
ಮನುಷ್ಯ ಜೀವನವು ಒಂದು ತೆರೆದ ಪುಸ್ತಕ. ಮೊದಲ, ಕೊನೆಯ ಪುಟದಲ್ಲಿ ಬದುಕು-ಸಾವನ್ನು ಭಗವಂತ ಬರೆದಿರುತ್ತಾನೆ. ಉಳಿದ ಪುಟಗಳನ್ನು ನಾವೇ ತುಂಬಿಸಿ ಜೀವನವನ್ನು ಸಮೃದ್ಧವಾಗಬೇಕಿದೆ. ನಾವು ಎಷ್ಟುದಿನ ಬದುಕಿದ್ದೇವೆ. ಎನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ಆದರ್ಶ ವ್ಯಕ್ತಿಗಳ ಬದುಕು ಯುವ ಜನಾಂಗಕ್ಕೆ ದಾರಿದೀಪವಾಗಬೇಕು. ವಿಠ್ಠಲ್‌ರಾವ್ ಅವರು ದತ್ತಪೀಠದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು ಹಿಂದು ಸಂಸ್ಕೃತಿಯನ್ನು ಉಳಿಸಿದ್ದಾರೆ ಎಂದು ಹೇಳಿದರು.
ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಅಧ್ಯಕ್ಷ ಎಸ್.ಎಚ್.ಪೂರ್ಣೇಶ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್, ವಿಠ್ಠಲ ರಾವ್ ಪುತ್ರ ಸುರೇಶ್ ಭಟ್, ಪ್ರಮುಖರಾದ ಸತೀಶ್ ಅರಳೀಕೊಪ್ಪ, ಬಿ.ಎಸ್.ಆಶೀಶ್‌ಕುಮಾರ್, ಶಾಂತಾ ಆನಂದ್, ಶ್ರೀಕೃಷ್ಣ ಭಟ್ ಇತರರಿದ್ದರು.