ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ಆಯೋಜಿಸಿದ್ದ ಜೇಸಿ ಸಪ್ತಾಹ ಹಾಗೂ ಆರೋಗ್ಯ ಮಾಹಿತಿ ಶಿಬಿರವನ್ನು ಮಣಿಪಾಲ್ ವೆಲ್‌ನೆಸ್ ಕ್ಲಬ್‌ನ ಅವಿನಾಶ್ ಉದ್ಘಾಟಿಸಿದರು. ಬಿ.ಎಸ್.ಅಜಿತ್, ರಚನ್ ಹುಯಿಗೆರೆ, ಸುಧಾಕರ್, ನಿಖಿಲ್, ಅಶೋಕ್ ಇದ್ದರು 
ನ್ಯೂಸ್

ಆರೋಗ್ಯವಿದ್ದರೆ ಎಲ್ಲ ಸೌಭಾಗ್ಯ ಪ್ರಾಪ್ತಿ

ಬಾಳೆಹೊನ್ನೂರು: ಜೀವನದಲ್ಲಿ ಆರೋಗ್ಯವಿದ್ದರೆ ಎಲ್ಲ ಸೌಭಾಗ್ಯಗಳು ತನ್ನಿಂದ ತಾನೇ ದೊರೆಯುತ್ತದೆ ಎಂದು ಮಣಿಪಾಲ್ ವೆಲ್‌ನೆಸ್ ಕ್ಲಬ್ ಸದಸ್ಯ ಅವಿನಾಶ್ ಹೇಳಿದರು.
ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಶನಿವಾರ ಆಯೋಜಿಸಿದ್ದ ಜೇಸಿ ಸಪ್ತಾಹ ಹಾಗೂ ಆರೋಗ್ಯ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಆಹಾರ ಪದ್ಧತಿ, ಜೀವನ ಶೈಲಿ, ರಾಸಾಯನಿಕ ಬಳಕೆ ಆಹಾರ ಸೇವನೆ, ಅತಿಯಾದ ಮೊಬೈಲ್ ಬಳಕೆ ಮುಂತಾದವುಗಳಿಂದ ಆರೋಗ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ವಿವಿಧ ಖಾಯಿಲೆಗಳಿಗೆ ತುತ್ತಾಗಿ ಕಿರಿಯ ವಯಸ್ಸಿನಲ್ಲಿ ಹಲವರು ಜೀವನ ತ್ಯಜಿಸುತ್ತಿದ್ದಾರೆ ಎಂದರು.
ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ನಿತ್ಯ ಯೋಗ, ವ್ಯಾಯಾಮ, ನಿಯಮಿತ ಆಹಾರ ಸೇವನೆ, ಉತ್ತಮ ಪರಿಸರದಲ್ಲಿ ಬದುಕುವುದನ್ನು ರೂಢಿ ಮಾಡಿಕೊಳ್ಳಬೇಕು. ಆಗ ಆರೋಗ್ಯವು ದೊರೆಯಲಿದೆ. ಜೀವನದಲ್ಲಿ ನೆಮ್ಮದಿಯೂ ಸಿಗಲಿದೆ ಎಂದರು.
ಜೇಸಿ ಪೂರ್ವಾಧ್ಯಕ್ಷ ಸುಧಾಕರ್ ಮಾತನಾಡಿ, ಜೇಸಿಐ ಸಂಸ್ಥೆ ಭಾರತಾದ್ಯಂತ ಸೆ.9ರಿಂದ 15ರವರೆಗೆ ಏಕಕಾಲದಲ್ಲಿ ಎಲ್ಲ ಜೇಸಿ ಘಟಕಗಳಲ್ಲಿ ಜೇಸಿ ಸಪ್ತಾಹ ನಡೆಸುತ್ತಿದೆ. ಪ್ರತಿ ದಿನವು ಒಂದೊಂದು ವಿಭಿನ್ನ ಕಾರ್ಯಕ್ರಮಗಳನ್ನು ಸಮಾಜಕ್ಕಾಗಿ ನಡೆಸುತ್ತಿದೆ. ಈ ಮೂಲಕ ಸಮಾಜ ಸೇವೆಯಲ್ಲಿಯೂ ಜೇಸಿ ಸಂಸ್ಥೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದೆ ಎಂದರು.
ಜೇಸಿ ಅಧ್ಯಕ್ಷ ಬಿ.ಎಸ್.ಅಜಿತ್ ಮಾತನಾಡಿ, ಜೇಸಿಐ ಭಾರತದ ನಿರ್ದೇಶನದಂತೆ ಸ್ಥಳೀಯ ಘಟಕಗಳು ವಿವಿಧ ವಿಭಾಗಗಳಲ್ಲಿ ಏಳು ದಿನ ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮೊದಲ ದಿನ ಆರೋಗ್ಯ ತಪಾಸಣೆ ನಡೆಸುವ ಮೂಲಕ ಆರೋಗ್ಯ ಮಾಹಿತಿಯನ್ನು ಸಹ ನೀಡಲಾಗುತ್ತಿದೆ ಎಂದರು.
ವೆಲ್‌ನೆಸ್ ಕ್ಲಬ್ ಸಹಯೋಗದಲ್ಲಿ ಸಾರ್ವಜನಿಕರು, ಜೇಸಿ ಸದಸ್ಯರಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆ ಪರೀಕ್ಷೆ ಮುಂತಾದ ತಪಾಸಣೆ ನಡೆಸಲಾಯಿತು. ಆಟೋ ನಿಲ್ದಾಣ, ಗೂಡ್ಸ್ ಆಟೋ ನಿಲ್ದಾಣ ಸೇರಿದಂತೆ ವಿವಿಧೆಡೆ ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ನೀಡಲಾಯಿತು.
ಜೇಸಿ ನಿಕಟಪೂರ್ವ ಅಧ್ಯಕ್ಷ ರಚನ್ ಜೆ.ಹುಯಿಗೆರೆ, ಕಾರ್ಯದರ್ಶಿ ನಿಖಿಲ್ ಕಾನ್ಕೆರೆ, ನಿರ್ದೇಶಕ ವಿ.ಅಶೋಕ್, ವೆಲ್‌ನೆಸ್ ಕ್ಲಬ್‌ನ ಮಹೇಶ್, ದಯಾನಂದ್ ಮತ್ತಿತರರು ಹಾಜರಿದ್ದರು.