ಬೇಲೂರು ; ಜನರಲ್ಲಿ ಯಾವುದೇ ರೀತಿಯ ಜ್ವರವಿರಲಿ ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಹೇಳಿದರು.
ಡೆಂಘೆ, ಚಿಕೂನ್‌ಗುನ್ಯ, ಮಲೇರಿಯಾ ತಡೆಗಟ್ಟುವ ಅಂಗವಾಗಿ ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಡೆಂಘೆ ಕಾಯಿಲೆ ಮಾರಣಾಂತಿಕವಾಗಿದ್ದು ಮಳೆಗಾಲ ಪ್ರಾರಂಭವಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಬೇಕು. ಡೆಂಘೆ ಸೋಂಕಿತ ಈಡೀಸ್ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಇದು ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುವುದಲ್ಲದೆ, ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಆದ್ದರಿಂದ ಸಾರ್ವಜನಿಕರು ಮನೆಯ ತೊಟ್ಟಿ, ಡ್ರಮ್ಮು, ಬ್ಯಾರಲ್‌ಗಳಲ್ಲಿ ನೀರು ಶೇಖರಿಸಿದಾಗ ಸರಿಯಾಗಿ ಮುಚ್ಚಿಡಬೇಕು. ವಾರಕ್ಕೊಮ್ಮೆ ಅದನ್ನು ಸ್ವಚ್ಛಗೊಳಿಸಿ ನೀರು ತುಂಬಿಸಬೇಕು. ಮನೆಯ ಹೊರಾಂಗಣದಲ್ಲಿ ತೆಂಗಿನ ಚಿಪು ್ಪ ಎಳನೀರು ಚಿಪ್ಪು, ಟೈರು, ಒಡೆದ ಬಾಟಲಿ, ಪ್ಲಾಸ್ಟಿಕ್ ಲೋಟದಂತ ವಸ್ತುಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ಸರಿಯಾಗಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಉಷಾ ಮಾತನಾಡಿ, ಡೆಂಘೆ ಜ್ವರದ ಲಕ್ಷಣಗಳಾದ ತೀವ್ರ ಜ್ವರ, ತಲೆನೋವು, ಮೈಕೈ ನೋವು, ಮಾಂಸ ಖಂಡಗಳಲ್ಲಿ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು. ಮತ್ತು ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಲು ಸೊಳ್ಳೆ ಪರದೆ ಬಳಸಬೇಕು. ಮೈತುಂಬ ಬಟ್ಟೆ ಧರಿಸಬೇಕು. ಡೆಂಘೆ, ಚಿಕೂನ್ ಗುನ್ಯಾ, ಮಲೇರಿಯಾ ಹರಡದಂತೆ ತಡೆಗಟ್ಟಲು ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿಷ್ಕ್ರಿಯ ಗೊಳಿಸಿದಾಗ ಮಾತ್ರ ಈ ರೋಗಗಳಿಂದ ಮುಕ್ತಿ ಹೊಂದಲ ಸಾಧ್ಯವೆಂದರು.
ತಹಸೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್ ಮಾತನಾಡಿ, ಇಲಾಖಾವಾರು ಜವಾಬ್ದಾರಿ ಕುರಿತು ಮಾಹಿತಿ ನೀಡಿ, ಎಲ್ಲರ ಸಹಕಾರದಿಂದ ಈ ಮೇಲ್ಕಂಡ ರೋಗಗಳನ್ನು ತಡೆಗಟ್ಟಲು ತಾಲೂಕು ಆಡಳಿತ ಸಂಪೂರ್ಣ ಸಹಕಾರ, ಬೆಂಬಲ ಸದಾ ನೀಡುತ್ತದೆ ಎಂದರು.
ಸಹಾಯಕ ನಿರ್ದೇಶಕ ಗುರುಪ್ರಸಾದ್, ತಾಲೂಕು ಪಂಚಾಯತಿಯ ಗಂಗಮ್ಮ , ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿ ಮೋಹನ್, ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರು, ಆಶಾ ಮೇಲ್ವಿಚಾರಕರು ಹಾಗೂ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.