| ಸತೀಶ್ ಕೆ.ಬಳ್ಳಾರಿ
ಬೆಂಗಳೂರು: ಕರೊನಾ ಮಟ್ಟಹಾಕುವ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಲಾಗಿದ್ದ ಲಾಕ್ಡೌನ್ನ ಮೊದಲ ಲಾಕ್ ಜೂ.8ಕ್ಕೆ ತೆರೆಯುವುದು ನಿಶ್ಚಿತವಾಗುತ್ತಿದ್ದಂತೆಯೇ ರಾಜ್ಯದ ಜನರ ಬದುಕು, ವ್ಯಾಪಾರ ವಹಿವಾಟು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಈ ಅನ್ಲಾಕನ್ನೇ ನೆಪವಾಗಿಸಿಕೊಂಡು ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸಿರುವ ಷರತ್ತುಗಳನ್ನು ಪಾಲಿಸದೆ ಕೊಂಚ ಮೈಮರೆತರೂ ಸೋಂಕು ಸಮುದಾಯಕ್ಕೆ ಹರಡುವುದು ಖಚಿತ ಎಂಬುದು ಆರೋಗ್ಯ ತಜ್ಞರ ಎಚ್ಚರಿಕೆ.
ಜೂ.1ರಿಂದ ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಂದ ರೈಲುಗಳ ಸಂಚಾರ ಹಾಗೂ ವಿಮಾನ ಸಂಚಾರಕ್ಕೆ ಅನುಮತಿ ಕೊಟ್ಟಿರುವುದರಿಂದ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಏರುವುದು ನಿಶ್ಚಿತವಾಗಿದೆ.
ಸೋಂಕಿನ ಮಧ್ಯೆಯೇ ಜೀವನ ನಡೆಸಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಿದರಷ್ಟೇ ಸೋಂಕು ಮುಕ್ತವಾಗಿರಲು ಸಾಧ್ಯವಾಗಲಿದೆ. ವ್ಯಾಪಾರ ವಹಿವಾಟು, ಸರ್ಕಾರಿ ಕಚೇರಿ, ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ಸಂಚಾರ, ಆಟೋ, ಟ್ಯಾಕ್ಸಿ, ಕೈಗಾರಿಕೆಗಳು ಆರಂಭವಾಗಿವೆ. ಜೂ.8ರಿಂದ ದೇವಸ್ಥಾನ, ಮಾರುಕಟ್ಟೆ, ಶಾಪಿಂಗ್ ಮಾಲ್ಗಳು, ಬಾರ್ ಆಂಡ್ ರೆಸ್ಟೋರೆಂಟ್ ಶುರುವಾಗಲಿರುವುದರಿಂದ ಇಲ್ಲೆಲ್ಲ ಜನಸಂದಣಿ ಹೆಚ್ಚಿರುತ್ತದೆ. ಈ ಹಂತದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಪಾಯ ತಪ್ಪಿದ್ದಲ್ಲ.
ಇದು ತಿಳಿದಿರಲಿ: ವಸತಿ ಸಮುಚ್ಛಯಗಳಲ್ಲಿ ಹೆಚ್ಚು ಜನರು ಸೇರುವಂತೆ ಸಮಾರಂಭ ಹಮ್ಮಿಕೊಳ್ಳಬಾರದು ಲಿಫ್ಟ್ಗಳು ಹಾಗೂ ಅದರ ಒತ್ತುಗುಂಡಿಗಳನ್ನು ಆಗಾಗ ಶುಚಿಗೊಳಿಸಬೇಕು. ಪಿ.ಜಿ, ಹಾಸ್ಟೆಲ್ಗಳಲ್ಲಿರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು 110 ಚ.ಅಡಿಗಿಂತ ಕಡಿಮೆ ವಿಸ್ತೀರ್ಣದ ಕೊಠಡಿಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಬೇಡ ಮಾರಾಟ ಮಳಿಗೆಗಳು ಭಾರಿ ಸಂಖ್ಯೆಯಲ್ಲಿ ಗ್ರಾಹಕರನ್ನು ಸೇರಿಸಬಾರದು ಜನಜಂಗುಳಿ ತಡೆಯಲು ಟೋಕನ್ ವ್ಯವಸ್ಥೆ ಜಾರಿಗೊಳಿಸಬಹುದು ಮಳಿಗೆಗಳಲ್ಲಿ ಸೋಂಕು ನಿವಾರಕ ದ್ರಾವಣ ಬಳಸಬೇಕು ಬಾಗಿಲು ಹಿಡಿಕೆ, ನೆಲ, ಕೌಂಟರ್ಗಳನ್ನು ಸೋಂಕು ನಿವಾರಕದಿಂದ ಸ್ವಚ್ಛಗೊಳಿಸುತ್ತಿರಬೇಕು.
ಸರ್ಕಾರದ ಜವಾಬ್ದಾರಿ: ಕೈಗಾರಿಕೆಗಳು, ಅಂಗಡಿಗಳ ಬಳಿ ನಿಯಮ ಪಾಲನೆಯಾಗುತ್ತಿದೆಯೇ ಗಮನಿಸಬೇಕು ಸಾಮಾಜಿಕ ಅಂತರವಿಲ್ಲದ, ಮಾಸ್ಕ್ ಧರಿಸದವರ ವಿರುದ್ಧ ಕೇಸ್ ದಾಖಲು ಪ್ರಕ್ರಿಯೆ ಮುಂದುವರಿಸಬೇಕು ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಆರೋಗ್ಯ ಇಲಾಖೆ ನಿಯಮ ಪಾಲನೆ ಪರಿಶೀಲಿಸಬೇಕು.