ನ್ಯೂಸ್

ಸೂಕ್ತ ಮಾರ್ಗದಲ್ಲಿ ಸಾಗಿದರೆ ಗುರಿ ಸಾಧನೆ: ಪ್ರೊ.ಚಂಬಿ ಪುರಾಣಿಕ್​ ಸಲಹೆ

ಬೆಂಗಳೂರು: ಕಲಿಕೆಯ ದಿಕ್ಸೂಚಿ ಸೂಕ್ತ ಮಾರ್ಗದಲ್ಲಿ ಸಾಗಿದರೆ ಸಾಧನೆ ಎಂಬ ಗುರಿ ಮುಟ್ಟಲು ಸಾಧ್ಯ ಎಂದು ಮುಖ್ಯ ಶೈಕ್ಷಣಿಕ ಸಲಹೆಗಾರ ಪ್ರೊ.ಚಂಬಿ ಪುರಾಣಿಕ್​, ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಸಿಎಂಆರ್​ ವಿಶ್ವವಿದ್ಯಾಲಯ ಶುಕ್ರವಾರ ಒಎಂಬಿಆರ್​ ಲೇಔಟ್​ನಲ್ಲಿ ಆಯೋಜಿಸಿದ್ದ "ಶೈಕ್ಷಣಿಕ ಮಾರ್ಗದರ್ಶನ' ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿ ಜೀವನದ ಪ್ರತಿ ಹಂತವೂ ಮೌಲ್ಯಯುತವಾದದ್ದು. ಮಹತ್ವಾಕಾಂಕ್ಷೆ ಜತೆಗೆ ಬದುಕಿನಲ್ಲಿ ಮೌಲ್ಯ, ಸಾಮಾಜಿಕ ಹೊಣೆಗಾರಿಕೆ ಅಳವಡಿಸಿಕೊಳ್ಳಬೇಕು. ಆ ಮೂಲಕ ಸಂವಿಧಾನದ ಆಶಯಗಳು ಯಶಸ್ವಿಗೊಳಿಸಲು ಕೈಜೋಡಿಸಬೇಕು. ಅದು ಪ್ರತಿಯೊಬ್ಬ ವಿದ್ಯಾರ್ಥಿಯ ಕೈಂಕರ್ಯವಾಗಬೇಕು. ದೇಶದ ಸರ್ವಾಂಗೀಣ ಪ್ರಗತಿ ಯುವಜನಾಂಗದ ಕೈಯಲ್ಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆ ಜತೆಗೆ, ನಾಯಕತ್ವ, ಕಾರ್ಯಪ್ರಧಾನತೆ, ನ್ಯಾಯಪರತೆ ಮತ್ತು ಜೀವನದ ಮೌಲ್ಯ ಗೌರವಿಸುವ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಪೂರ್ಣರಾಗಬೇಕು ಎಂದರು.

ಸಿಎಂಆರ್​ ವಿವಿ ಕುಲಪತಿ ಡಾ.ಎಚ್​.ಬಿ. ರಾವೇಂದ್ರ ಮಾತನಾಡಿ, ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆ ಪೂರೈಸುವ, ಸರ್ವತೋಮುಖ ಬೆಳವಣಿಗೆಗೆ ಬೇಕಾದ ಅತ್ಯುತ್ತಮ ಕಲಿಕಾ ವಾತಾವರಣವನ್ನು ನಮ್ಮ ವಿವಿ ಕಲ್ಪಿಸಿಕೊಟ್ಟಿದೆ. ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉಜ್ವಲಗೊಳಿಸಬೇಕು ಎಂದು ಕಿವಿಮಾತು ಹೇಳಿದರು. 2024ನೇ ಶೈಕ್ಷಣಿಕ ಸಾಲಿನ ಸ್ಕೂಲ್​ ಆಫ್​​​ ಮ್ಯಾನೇಜ್​ಮೆಂಟ್​, ಸ್ಕೂಲ್​ ಆಫ್​​ ಎಕನಾಮಿಕ್ಸ್​ ಆ್ಯಂಡ್​ ಕಾಮರ್ಸ್​, ಸ್ಕೂಲ್​ ಆಫ್​​​ ಕಂಪ್ಯೂಟರ್​ ಸ್ಟಡಿಸ್​ ಮತ್ತು ಸ್ಕೂಲ್​ ಆಫ್​​​ ಲೀಗಲ್​ ಸ್ಟಡಿಸ್​ ತರಗತಿಗಳಿಗೆ ಚಾಲನೆ ನೀಡಲಾಯಿತು. ಸಿಎಂಆರ್​ ವಿವಿ ಕುಲಸಚಿವ ಡಾ. ಆರ್​. ಪ್ರವಿಣ್​, ಶಿಕ್ಷಣ ವಿಭಾಗಗಳ ಡೀನ್​, ನಿರ್ದೇಶಕರು ಉಪಸ್ಥಿತರಿದ್ದರು.