ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ನೀಡಿದ ಅಭಿಪ್ರಾಯಗಳನ್ನು ನೀವು ನಂಬದಿದ್ದರೆ, ಒಂದು ಕೆಲಸ ಮಾಡಿ ಮೊದಲು ನೀವು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ. ಕಾಂಗ್ರೆಸ್ ಸಂಸದರಾದ ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಸಭೆಗೆ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದು, ಚುನಾವಣಾ ಸಂಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ನವದೆಹಲಿ: ಚುನಾವಣಾ ಆಯೋಗದ (ಇಸಿ) ಮೇಲೆ ನಂಬಿಕೆ ಇಲ್ಲದಿದ್ದರೆ ಕಾಂಗ್ರೆಸ್ ಸಂಸದ ನೈತಿಕ ಆಧಾರದ ಮೇಲೆ ಲೋಕಸಭೆಗೆ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ.
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಕೂಡ ತಮ್ಮ ಉನ್ನತ ನಾಯಕರಿಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದ ಕಾರಣ ರಾಜೀನಾಮೆ ನೀಡಬೇಕು ಎಂದು ಭಾಟಿಯಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ರಾಹುಲ್ ಗಾಂಧಿ ಮಾಧ್ಯಮಗಳ ಮುಂದೆ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಮತ್ತು ಚುನಾವಣಾ ಆಯೋಗವು ಪುರಾವೆಗಳನ್ನು ನೀಡಲು ಅಥವಾ ಲಿಖಿತ ಘೋಷಣೆಯನ್ನು ಕೇಳಿದಾಗ ಅದನ್ನು ನೀಡಲು ನಿರಾಕರಿಸಿದ್ದಾರೆ ಎಂದು ಭಾಟಿಯಾ ಹೇಳಿದ್ದಾರೆ. ಚುನಾವಣಾ ಆಯೋಗದ ಪ್ರಾಮಾಣಿಕತೆಯ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಚುನಾವಣಾ ಸಂಸ್ಥೆಯು ವರ್ಷಗಳಲ್ಲಿ ನಿಷ್ಪಕ್ಷಪಾತ ಸಂಸ್ಥೆಯಾಗಿ ತನ್ನ ಖ್ಯಾತಿಯನ್ನು ಗಳಿಸಿದೆ ಎಂಬುದು ದಾಖಲೆಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
(ಏಜೆನ್ಸೀಸ್)
ಇದಕ್ಕಾಗಿ ಬಿಜೆಪಿ ಜೊತೆಗೆ ಚುನಾವಣಾ ಆಯೋಗ ಶಾಮಿಲಾಗಿರುವುದು ನಮ್ಮ ಪಕ್ಷದ ಆಂತರಿಕ ತನಿಖೆಯಿಂದ ಪತ್ತೆಯಾಗಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ಕಿಡಿಕಾರಿದ್ದು, ಇದೆಲ್ಲವೂ ಆಧಾರರಹಿತ ಎಂದು ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ರಾಹುಲ್, ನಾವು ಒಂದಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಎಂದು ಪ್ರಬಲ ವಾದ ಮಂಡಿಸಿರುವುದು ಹಲವರ ಹುಬ್ಬೇರಿಸಿದೆ.
ದೇಶದ ಹಲವು ರಾಜ್ಯಗಳ ಮತದಾರರ ಪಟ್ಟಿಗಳಲ್ಲಿ ನಕಲಿ ಮತದಾರರ ಹೆಸರುಗಳಿವೆ ಎಂದಿರುವ ರಾಹುಲ್ ಗಾಂಧಿ, ಚುನಾವಣಾ ಫಲಿತಾಂಶಗಳು, ಎಕ್ಸಿಟ್ ಪೋಲ್ ಮತ್ತು ಅಭಿಪ್ರಾಯ ಸಮೀಕ್ಷೆಗಳ ವಿರುದ್ಧವಾಗಿಯೇ ಹೊರಬರುತ್ತಿರುವುದು ತೀರ ಆಶ್ಚರ್ಯ ಮೂಡಿಸಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಮಹಾರಾಷ್ಟ್ರ, ಹರಿಯಾಣ ಮತ್ತು ಮಧ್ಯಪ್ರದೇಶದ ಚುನಾವಣಾ ಫಲಿತಾಂಶಗಳನ್ನು ಟೀಕಿಸಿರುವ ಕೈ ನಾಯಕ, ಕಳೆದ ವರ್ಷದಲ್ಲಿ (2024) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ವಿಧಾನಸಭೆಯ ಕ್ಷೇತ್ರದಲ್ಲಿ ಭಾರೀ ಮತಗಳ್ಳತನವಾಗಿದೆ ಎಂದಿದ್ದಾರೆ.