ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮಚ್ಚಿಯಲ್ಲಿ ಭರವಸೆ ಟ್ರಸ್ಟ್‌ನಿಂದ ನಿರ್ಮಾಣಗೊಂಡ ಕಾಮಧೇನು ಗೋಶಾಲೆಯಲ್ಲಿ ಗೋವಿಗೆ ಅರ್ಜುನ ಅವಧೂತರು, ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ ಮತ್ತಿತರರು ಪೂಜೆ ಸಲ್ಲಿಸಿದರು. 
ನ್ಯೂಸ್

ಗೋಸೇವೆ ಮಾಡಿದರೆ ಸಂಕಷ್ಟಗಳು ದೂರ

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮಚ್ಚಿಯಲ್ಲಿ ಭರವಸೆ ಟ್ರಸ್ಟ್‌ನಿಂದ ನೂತನವಾಗಿ ನಿರ್ಮಾಣಗೊಂಡ ಕಾಮಧೇನು ಗೋಶಾಲೆಯು ಮೈಸೂರಿನ ಅರ್ಜುನ ಅವಧೂತ ಗುರು ಮಹಾರಾಜರು, ಮೂಲೆಗದ್ದೆ ಶ್ರೀ ಸದಾನಂದ ಶಿವಯೋಗಾಶ್ರಮ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಬ್ರಹ್ಮಶ್ರೀ ನಾರಾಯಣಗುರು ಮಹಾ ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳ ಸಮ್ಮುಖದಲ್ಲಿ ಶುಭಾರಂಭವಾಯಿತು.

ಅರ್ಜುನ ಅವಧೂತರು ಮಾತನಾಡಿ, ಹಳ್ಳಿಯ ಸೊಬಗಿಗೆ ವಿಶೇಷ ಮಹತ್ವವಿದೆ. ಅದನ್ನು ಉಳಿಸುವ ಕಾರ್ಯ ಆಗಬೇಕು. ಕಸ ತಿಂದು ಅಮೃತ ನೀಡುವ ಗೋವಿನ ಹಾಲುಂಡ ಮನುಷ್ಯ ವಿಷಕಕ್ಕುವ ಕೆಲಸ ಸಾಧುವಲ್ಲ. ಸ್ವಾರ್ಥದ ಜೀವನ ಸಾರ್ಥಕವಲ್ಲ. ನಿತ್ಯ ಪೂಜೆ ಪುನಸ್ಕಾರಗಳ ಜತೆ ಗೋಸೇವೆಯನ್ನೂ ಮಾಡಿದರೆ ಎಲ್ಲ ಸಂಕಷ್ಟಗಳೂ ನಿವಾರಣೆಯಾಗುತ್ತವೆ ಎಂದರು.

ತಂದೆ-ತಾಯಿ, ಗೋವುಗಳನ್ನು ತಾತ್ಸಾರ ಮಾಡುವುದಾದರೆ ಅದು ಜೀವನ ಮೌಲ್ಯವಲ್ಲ. ಲಕ್ಷಾಂತರ ರೂಪಾಯಿ ಸಂಪಾದನೆ ನಿಮ್ಮನ್ನು ಗುಲಾಮಗಿರಿಗೆ ನೂಕಿದೆ ಎಂಬುದು ನಿಮಗಿನ್ನೂ ಅರಿವಿಲ್ಲ. ಸರ್ವರಿಗೂ ಪ್ರಿಯವಾದ ಹಾಲು ನೀಡುವ ಗೋಮಾತೆಗೆ ಇಲ್ಲದ ಜಾತಿಭೇದ ನಮಗೇಕೆ? ಅಂಧಕಾರದಲ್ಲಿ ಬಿದ್ದು ನರಳಾಡುವ ಬದಲು ಗೋಮಾತೆಯ ಸೇವೆ ಮಾಡಿ ಜೀವನ ಪಾವನ ಮಾಡಿಕೊಳ್ಳಿ ಎಂದು ತಿಳಿಸಿದರು.

ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಗೋ ಸಂತತಿ ನಶಿಸುತ್ತಿರುವ ಸಂದರ್ಭದಲ್ಲಿ ಪೋಷಣೆಯ ಕಾರ್ಯ ಮಹತ್ವದ್ದು. ಸಂಸ್ಥೆಯು ಕೈಗೊಂಡ ಉದ್ದೇಶದಲ್ಲಿ ಯಶಸ್ವಿಯಾಗಲಿ ಎಂದರು.

ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ ಮಾತನಾಡಿ, ಕೋಟಿ ಪುಣ್ಯ ಗಳಿಸಬೇಕೆಂದರೆ ಪುಣ್ಯಕೋಟಿಯನ್ನು ಉಳಿಸಬೇಕು. ನಮ್ಮ ಸಂಸ್ಕೃತಿಯಲ್ಲಿ ತಾಯಿಗೆ ಇದ್ದಷ್ಟೇ ಗೌರವ ಗೋವಿಗೂ ಇದೆ. ನಿಖರವಾದ ಆಯುಷ್ಯ ಇಲ್ಲದ ಜೀವನದಲ್ಲಿ ಇದ್ದಷ್ಟು ದಿನ ಒಳ್ಳೆಯ ಕೆಲಸ ಕಾರ್ಯಗಳು ಮಾಡಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಯಶಸ್ವತಿ ಜೈನ್, ಮಂಜುನಾಥ್, ಯಡೇಹಳ್ಳಿ ರವಿಕುಮಾರ್, ಗ್ರಾಪಂ ಅಧ್ಯಕ್ಷ ಸಚಿನ್ ಗೌಡ, ಕಾಶಿ ಇದ್ದರು.