ನಾವು ಒಮ್ಮೆ ಚೆನ್ನೈಯಿಂದ ಪುದುಚ್ಚೇರಿಗೆ ಹೋಗುತ್ತಿದ್ದೆವು. ರಸ್ತೆಯಲ್ಲಿ ಒಂದು ಅತೀ ಪ್ರಾಚೀನವಾದ ದೇವಸ್ಥಾನವಿತ್ತು.. ಅದು ಸ್ವಲ್ಪ ಶಿಥಿಲಾವಸ್ಥೆಯಲ್ಲೂ ಇತ್ತು. ಅದು ಭಗವಾನ್ ವಿಷ್ಣುವಿನ ದೇವಸ್ಥಾನವಾಗಿತ್ತು. ಓರ್ವ ವೃದ್ಧ ಪೂಜಾರಿಗಳು ಆ ದೇವಸ್ಥಾನದ ಕಥೆಯನ್ನು ಹೇಳಿದರು. ಕಾಲನೇಮಿ ಎಂಬ ಋಷಿಗಳೋರ್ವರು ಇದ್ದರು ಮತ್ತು ಅವರಿಗೆ 365 ಹೆಣ್ಣುಮಕ್ಕಳಿದ್ದರು. ಇದನ್ನು ಕೇಳಿ ಗಾಬರಿಯಾಗಬೇಡಿ! ಅಷ್ಟೂ ಹೆಣ್ಣುಮಕ್ಕಳಿಗೆ ವಿವಾಹ ಮಾಡಿಸಬೇಕಿತ್ತು. ಇದರಿಂದ ಅವರು ಬಹಳ ಚಿಂತಿತರಾಗಿದ್ದರು. ಅವರ ದೊಡ್ಡ ಪರಿವಾರದಿಂದಾಗಿ ಅವರ ಬಳಿ ಯಾರೂ ಬರುತ್ತಿರಲಿಲ್ಲ. ಒಬ್ಬರಿಗೆ ಉಡುಗೊರೆ ಎಂದು ಕೊಡಲು ಸಾಧ್ಯವಿಲ್ಲವಲ್ಲ? ಅಷ್ಟು ಜನರಿಗೂ ಉಡುಗೊರೆ ಕೊಡಬೇಕು! ಯಾರೂ ಇವರನ್ನು ಔತಣಕೂಟಕ್ಕೆ ಕರೆಯುತ್ತಿರಲಿಲ್ಲ. ಅವರನ್ನು ಕರೆದರೆ ಎಲ್ಲಾ 365 ಹೆಣ್ಣುಮಕ್ಕಳೂ ಬಂದುಬಿಡುತ್ತಾರೆಂದು ಯಾರೂ ಅವರನ್ನು ಕರೆಯುತ್ತಿರಲಿಲ್ಲ! ಈ ರೀತಿಯಾಗಿ ಅನೇಕ ಸಮಸ್ಯೆಗಳು ಇದ್ದುದರಿಂದ ಅವರು ಭಗವಂತನನ್ನು ಸದಾ ಪ್ರಾರ್ಥಿಸುತ್ತಿದ್ದರು.
ಒಂದು ದಿನ ಭಗವಾನ್ ವಿಷ್ಣು ಅವರೆಉರು ಪ್ರತ್ಯಕ್ಷನಾದ. ‘ನೀನು ಚಿಂತಿಸಬೇಡ. ನಿನ್ನ ಎಲ್ಲ ಹೆಣ್ಣುಮಕ್ಕಳನ್ನೂ ನಾನೇ ವಿವಾಹವಾಗುತ್ತೇನೆ!’ ಎಂದ. ಮಾತ್ರವಲ್ಲ ಭಗವಾನ್ ಆ ಎಲ್ಲಾ 365 ಹೆಣ್ಣುಮಕ್ಕಳನ್ನೂ ಮದುವೆಯಾದ. ಆದ್ದರಿಂದ ಭಗವಂತನಿಗೆ, ನಿತ್ಯಕಲ್ಯಾಣ ಶ್ರೀನಿವಾಸ ಎಂಬ ಹೆಸರು ಬಂದಿತು, ಎಂದರೆ ಪ್ರತಿನಿತ್ಯವೂ ಅವನು ಮದುಮಗನು. ಎಲ್ಲರೂ ಜೀವನದಲ್ಲಿ ಒಂದು ಸಲ ಮದುಮಗನಾದರೆ, ಇಲ್ಲಿ ಭಗವಂತ ನಿತ್ಯ ಮದುಮಗ! ಮದುಮಗನ ಸುತ್ತಲೂ ಸದಾ ಸಡಗರವೇ ಅಲ್ಲವೇ!
ಈ ಕಥೆಯನ್ನು ಕೇಳಿದಾಗ ಸ್ವಲ್ಪ ಮುಜುಗರವುಂಟಾಗುತ್ತದೆ, ಭಗವಾನ್ ವಿಷ್ಣುವಿಗೆ ಇಷ್ಟೊಂದು ಪತ್ನಿಯರೇ? ಎಂದು. ಇದರ ಬಗ್ಗೆ ಸ್ವಲ್ಪ ಆಳವಾಗಿ ಯೋಚಿಸಿದರೆ ಒಂದು ಅದ್ಭುತವಾದ ರಹಸ್ಯ ಈ ಕಥೆಯಲ್ಲಿದೆ. ನಾವು ಯಾವಾಗಲೂ ಇದು ಒಳ್ಳೆಯ ದಿನ, ಇದು ಕೆಟ್ಟ ದಿನ, ಈ ದಿನ ಸರಿಯಿಲ್ಲ ಎಂದೆಲ್ಲಾ ನೋಡುತ್ತೇವೆ. 365 ದಿನಗಳಲ್ಲಿ ಕೆಲವು ದಿನಗಳನ್ನು ಒಳ್ಳೆಯ ದಿನಗಳಾಗಿ ಮತ್ತು ಕೆಲವು ದಿನಗಳನ್ನು ಕೆಟ್ಟ ದಿನಗಳಾಗಿ ಪರಿಗಣಿಸುತ್ತೇವೆ. ಆದರೆ ಭಗವಂತನೊಡನಿದ್ದಾಗ, ಪ್ರತಿದಿನವೂ ಮದುವೆಯ ದಿನವೇ, ಮಂಗಳಕರ ದಿನವೇ! ಪ್ರತಿನಿತ್ಯವೂ ಮಂಗಳಕಾರ್ಯ ನಡೆಯುತ್ತದೆ! ಪ್ರತಿದಿನವನ್ನೂ ಒಂದು ಕನ್ಯೆಯಾಗಿ ಪರಿಗಣಿಸಿದರೆ ಮತ್ತು ಆ ಪ್ರತಿದಿನವೂ ಭಗವಂತನ ಮದುಮಗಳಾದರೆ, ಆ ದಿನವು ಹೇಗೆ ಕೆಟ್ಟ ದಿನವಾಗಲು ಸಾಧ್ಯ?! ಕೆಟ್ಟದಾಗಿರುವ ಸಾಧ್ಯತೆಯೇ ಇಲ್ಲ. ಆ ಕನ್ಯೆಯರನ್ನು ತಿಥಿ ದೇವತೆಗಳು ಎಂದು ಕರೆಯುತ್ತಾರೆ. ಯಾರು ತಮ್ಮ ಮನಸ್ಸನ್ನು ಭಗವಂತನ ಮೇಲಿಡುತ್ತಾರೋ ಅವರಿಗೆ ಕೆಟ್ಟ ದಿನ ಎನ್ನುವಂಥದ್ದೇ ಇರುವುದಿಲ್ಲ! ಪ್ರತಿನಿತ್ಯವೂ ಉತ್ಸವವೇ. ಇದೇ ಕಥೆಯ ಸಾರ.
ಎಷ್ಟು ಅದ್ಭುತವಾದ ಸಿದ್ಧಾಂತವಿದು! ಋಷಿಗಳ ಹೆಸರೇನು? ಕಾಲನೇಮಿ. ಏನದು ಕಾಲನೇಮಿ ಎಂದರೆ? ಹಾಗೆಂದರೆ ಕಾಲದ ನಿಯಮಕ್ಕೆ ತಕ್ಕಂತೆ ನಡೆಯುವವನು. ಕಾಲನೇಮಿಯಿಂದ ಜನಿಸಿರುವ ಪ್ರತಿಯೊಂದು ದಿನವೂ ಭಗವಂತನಿಗೆ ಸಮರ್ಪಿತವಾಗಿದೆ. ಪ್ರತಿಯೊಂದು ದಿನವೂ ಭಗವಂತನ ಮದುಮಗಳು. ಆದ್ದರಿಂದ ಯಾವ ದಿನವೂ ಕೆಟ್ಟದಾಗಿ, ಅಸುಂದರವಾಗಿ ಇರಲು ಸಾಧ್ಯವೇ ಇಲ್ಲ. ಎಲ್ಲಾ ಗ್ರಹಗಳ ಮೇಲೂ ಶಿವನು ಕುಳಿತ್ತಿದ್ದಾನೆ. ‘ಓಂ ನಮಃ ಶಿವಾಯ’ ಎಂದು ಮಂತ್ರೋಚ್ಚಾರಣೆ ಮಾಡಿದರೆ ಸಾಕು. ಎಲ್ಲಾ ದಿನಗಳೂ ಒಳ್ಳೆಯ ದಿನವೇ ಆಗುತ್ತವೆ. ಪುರಂದರದಾಸರು, ‘ಸಕಲ ಗ್ರಹಬಲ ನೀನೇ ಸರಸಿಜಾಕ್ಷ’ ಎಂದು ಹಾಡಿದ್ದಾರೆ. ಸರಸಿಜಾಕ್ಷನಾದ ವಿಷ್ಣುವಿನೊಳಗೆ ಎಲ್ಲಾ ಗ್ರಹಗಳ ಬಲವೂ ಇದೆ. ಭಗವಂತನ ಸೂಚನೆ ಮಾತ್ರದಿಂದಲೇ ಎಲ್ಲಾ ಗ್ರಹಗಳೂ ಚಲಿಸುತ್ತವೆ ಎಂದು ಪುರಂದರದಾಸರು ಹೇಳಿದ್ದಾರೆ.
ಒಳ್ಳೆಯ ಕೆಲಸ ಮಾಡಿದರೆ ಪ್ರತಿದಿನವೂ ಒಳ್ಳೆಯ ದಿನವೇ. ಕೆಟ್ಟ ಕೆಲಸ ಮಾಡಿದರೆ, ಬಹಳ ಒಳ್ಳೆಯ ದಿನವೂ ಕೆಟ್ಟ ದಿನವೇ ಆಗಿಬಿಡುತ್ತದೆ. ಆದ್ದರಿಂದ, ನಿತ್ಯವೂ ಕಲ್ಯಾಣವೇ ಆಗುತ್ತದೆ. ಆದ್ದರಿಂದ ಪ್ರತಿದಿನವೂ ಒಳ್ಳೆಯ ದಿನವೇ ಎಂಬುದನ್ನು ನಿಮ್ಮ ಮನದಲ್ಲಿ ನಿಶ್ಚಯಿಸಿಕೊಂಡುಬಿಡಿ!
(ಲೇಖಕರು ಆಧ್ಯಾತ್ಮಿಕ ಚಿಂತಕರು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು) (ಪ್ರತಿಕ್ರಿಯಿಸಿ: instagram@gurudev.kannada)