ನ್ಯೂಸ್

ಹೊಸ ವಿವಿ ನೀವು ಮುಚ್ಚಿದರೆ ನಾವು ಮತ್ತೆ ತೆರೆಯುತ್ತೇವೆ: ಡಾ. ಸಿ.ಎನ್. ಅಶ್ವತ್ಥ ನಾರಾಯಣ ಎಚ್ಚರಿಕೆ

ಬೆಂಗಳೂರು: ಹೊಸ ವಿಶ್ವವಿದ್ಯಾಲಯಗಳನ್ನು ಕಾಂಗ್ರೆಸ್ ಸರ್ಕಾರವು ಕಾನೂನಾತ್ಮಕವಾಗಿ ಮುಚ್ಚಲು ಸಾಧ್ಯವಿಲ್ಲ. ಒಂದು ವೇಳೆ ಮಚ್ಚಿದರೂ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಲ್ಲಿ ಮತ್ತೆ ‘ಜಿಲ್ಲೆಗೊಂದು ವಿಶ್ವವಿದ್ಯಾಲಯ’ಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

ತಮ್ಮ ಅವಧಿಯಲ್ಲಿ ೋಷಣೆಯಾದ 9 ವಿಶ್ವವಿದ್ಯಾಲಯಗಳನ್ನು ಹಣಕಾಸಿನ ಕೊರತೆ ಕಾರಣ ನೀಡಿ ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರವ ವಿರುದ್ಧ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದರು.

ಹೊಸ ವಿವಿ ಆರಂಭಕ್ಕೆ ಅವಕಾಶವೇ ಸಿಗಲ್ಲ:

ನಾವು 21ನೇ ಶತಮಾನದಲ್ಲಿದ್ದೇವೆ. ವಿದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆ, ಡಿಜಿಟಲೀಕರಣ, ಗುಣಮಟ್ಟ. ಶಿಕ್ಷಣದ ಮೌಲ್ಯಗಳ ಬಗ್ಗೆ ಮಾತನಾಡುತ್ತೇವೆ. ಅದೇ ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಅನುಷ್ಠಾನದ ವಿಚಾರ ಬಂದಾಗ ಮಾತ್ರ ಹಿಂದೇಟು ಹಾಕುತ್ತೇವೆ. ಒಂದು ವೇಳೆ ಈಗ ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಿದರೆ, ಮುಂದಿನ ದಿನಗಳಲ್ಲಿ ಆ ವಿಶ್ವವಿದ್ಯಾಲಯಗಳನ್ನು ಮತ್ತೆ ಆರಂಭಿಸುವ ಸಮಯವೇ ಬರುವುದಿಲ್ಲ. ಹೀಗಾಗಿ, ಹೊಸ ವಿವಿಗಳನ್ನು ಮುನ್ನಡೆಸುವತ್ತ ಕಾರ್ಯೋನ್ಮುಖರಾಗಬೇಕಿದೆ ಎಂದರು.

ಹೊಸ ವಿವಿಗಳು ಹೊರೆಯಾಗಿಲ್ಲ:

ಹೊಸ ವಿವಿಗಳು ಸರ್ಕಾರಕ್ಕೆ ಹೊರೆಯಾಗಿವೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಯಾವುದೇ ರೀತಿಯಲ್ಲಿ ಅವುಗಳು ಹೊರೆಯಾಗಿಲ್ಲ. ಒಬ್ಬ ಕುಲಪತಿಗಿರುವ ಸಮಾನವಾಗಿ ಹಿರಿಯ ಪ್ರಾಧ್ಯಾಪಕರ ವೇತನವಿದೆ. ವಿವಿ ಆಡಳಿತ ಕಚೇರಿಗೂ ಹೆಚ್ಚುವರಿಯಾಗಿ ಆರ್ಥಿಕವಾಗಿ ತೊಂದರೆಯಾಗಿಲ್ಲ. ಇರುವ ಸಂಪನ್ಮೂಲದಲ್ಲಿಯೇ ಅಚ್ಚುಕಟ್ಟಾಗಿ ನಡೆಯುತ್ತಿವೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡುವ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದು ದೂಷಿಸಿದರು.

ಹೊಸ ವಿವಿ ಮುಚ್ಚುವುದು ಸುಲಭವಲ್ಲ:

ಯುಜಿಸಿ ಮಾನ್ಯತೆ ಪಡೆದು ಆರಂಭವಾದ ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಕಾನೂನಾತ್ಮಕವಾಗಿ ಅವಕಾಶವಿಲ್ಲ. ಒಂದು ವೇಳೆ ಮುಚ್ಚುವುದಾದರೂ ನಿಖರ ಕಾರಣಗಳನ್ನು ನೀಡಬೇಕಾಗುತ್ತದೆ. ಹಣಕಾಸಿನ ಕಾರಣ ನೀಡುವುದನ್ನು ಯುಜಿಸಿ ಒಪ್ಪುವುದಿಲ್ಲ. ಸ್ಥಳೀಯವಾಗಿ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಎಷ್ಟಿದೆ?. ಹೆಣ್ಣುಮಕ್ಕಳ ಶಿಕ್ಷಣದ ಪ್ರಮಾಣವೇನು? ಭೌಗೋಳಿಕವಾಗಿ ಮತ್ತು ಶೈಕ್ಷಣಿಕವಾಗಿ ಪರಿಸ್ಥಿತಿಗಳೇನು? ಎಂಬುದು ಸೇರಿ ಹಲವು ಪ್ರಶ್ನೆಗಳನ್ನು ಯುಜಿಸಿ ಕೇಳಲಿದೆ ಎಂದು ಹೇಳಿದರು.

ಕ್ಲಸ್ಟರ್ ವಿವಿ ಅನುಮತಿ ಕಾಂಗ್ರೆಸ್ ಅವಧಿಯಲ್ಲಿಯೇ ಸಿಕ್ಕಿದ್ದು

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ ಮತ್ತು ನೃಪತುಂಗ ವಿಶ್ವವಿದ್ಯಾಲಯಕ್ಕೆ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಅವಕಾಶ ದೊರೆತಿದೆ.

ರೂಸಾ ಅನುದಾನದಡಿ 2015ರಲ್ಲಿ ಮಹಾರಾಣಿ ಕ್ಲಸ್ಟರ್ ಮತ್ತು ಮಂಡ್ಯಕ್ಕೆ ಅನುಮತಿ ದೊರೆಯಿತು. 2018ರಲ್ಲಿ ರೂಸಾ-2 ಅಡಿ ನೃಪತುಂಗಕ್ಕೆ ಅನುಮತಿ ದೊರೆತಿದೆ. ರೂಸಾ-1ರಲ್ಲಿ ದೇಶಾದ್ಯಂತ 8 ವಿವಿಗಳಿಗೆ ಅವಕಾಶ ನೀಡಲಾಗಿತ್ತು. ಈ ಪೈಕಿ ರಾಜ್ಯದ 2 ವಿವಿಗಳಿಗೆ ಅನುಮತಿ ನೀಡಲಾಗಿತ್ತು. ರೂಸಾ-2ರಲ್ಲಿ ನೃಪತುಂಗ ಆಯ್ಕೆಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಷ್ಠಾನ ಮಾಡಲಾಯಿತು. ಕ್ಲಸ್ಟರ್ ವಿವಿಗಳ ಮೂಲಸೌಕರ್ಯ ಅಭಿವೃದ್ಧೀಗೆ ಕೇಂದ್ರದಿಂದ ತಲಾ 50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇವರು ಎಷ್ಟು ಅನುದಾನ ನೀಡಿದ್ದಾರೆ ಎಂದರು.

ಖಾಸಗಿ ವಿವಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ, ಸರ್ಕಾರಿ ಏಕೆ ಬೇಡ

ಪ್ರತಿ ವರ್ಷ ಒಂದಿಲ್ಲೊಂದು ಖಾಸಗಿ ವಿಶ್ವವಿದ್ಯಾಲಯಗಳು ಆರಂಭವಾಗುತ್ತಲೇ ಇವೆ. ಅದೇ ಸರ್ಕಾರಿ ವಿವಿಗಳ ಸಂಖ್ಯೆ ಮಾತ್ರ ಹೆಚ್ಚಿಸಲು ಮಾತ್ರ ಏಕೆ ಹಿಂದೇಟು ಹಾಕುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಳವಾಗಲೇಬೇಕು ಎಂದು ಹೇಳಿದರು.

ಪ್ರತಿ ವಿಶ್ವವಿದ್ಯಾಲಯಗಳ ನಿರ್ವಹಣೆಗೆ 342 ಕೋಟಿ ರೂ.ಗಳು ಬೇಕು ಎಂದು ವರದಿ ಕೊಟ್ಟವರಾರು? ಅದನ್ನು ಯಾವ ಮಾನದಂಡದ ಆಧಾರದಲ್ಲಿ ಅಳತೆ ಮಾಡಿದ್ದಾರೆ. ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆಯೇ? - ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಮಾಜಿ ಸಚಿವ