ಪವಿತ್ರಾ ಕುಂದಾಪುರ ಬೆಂಗಳೂರು
ಅಪರಾಧಿಗೆ ಅನಾರೋಗ್ಯವಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆಂದು ಅರ್ಜಿ ಸಲ್ಲಿಸುತ್ತೀರಿ. ಆದರೆ, ಅನಾರೋಗ್ಯಕ್ಕೀಡಾಗಿರುವುದು ಅಪರಾಧಿಯೋ ಆತನ ತಾಯಿಯೋ ಅಥವಾ ಆತನ ತಂದೆಯೋ ಎಂಬುದನ್ನೇ ಹೇಳಲ್ಲ. ಇದೇ ರೀತಿ ಇನ್ನೊಮ್ಮೆ ಪೂರಕ ದಾಖಲೆಗಳಿಲ್ಲದೆ ಅರ್ಜಿ ಸಲ್ಲಿಸಿದರೆ ದಂಡ ವಿಧಿಸಿ ವಜಾಗೊಳಿಸಬೇಕಾಗುತ್ತದೆ..
ಮನಬಂದಂತೆ ಪರೋಲ್‌ಗಾಗಿ ಅರ್ಜಿಗಳನ್ನು ಸಲ್ಲಿಸುತ್ತಿರುವ ಕ್ರಮಕ್ಕೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದ ಪರಿ ಇದು. ಸೂಕ್ತ ಕಾರಣಗಳಿಲ್ಲದೆ ಬೇಕಾಬಿಟ್ಟಿಯಾಗಿ ಪರೋಲ್ಗೆ ಅರ್ಜಿ ಸಲ್ಲಿಸಿದರೆ ಸಮ್ಮನಿರಲ್ಲ. ಪ್ರತಿ ಬಾರಿ ನ್ಯಾಯಪೀಠದ ಮೇಲೆ ಸವಾರಿ ಮಾಡುವ ನಿಮ್ಮ ನಡೆ ನೋಡಿ ಸಾಕೆನಿಸಿಗಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಾಂಗ ಬಂಧನಕ್ಕೊಳಗಾದ ಕೈದಿಗೆ ಪರೋಲ್ ಮಂಜೂರು ಮಾಡುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಅಪರಾಧಿ ಪರ ವಕೀಲರನ್ನು ಪೀಠ ತರಾಟೆಗೆ ತೆಗೆದುಕೊಂಡಿತು. ಕಲಾಪ ಪ್ರಾರಂಭವಾಗುತ್ತಿದಂತೆಯೇ ಅಪರಾಧಿ ಪರ ವಕೀಲರು ಪರೋಲ್ ಮಂಜೂರು ಮಾಡುವಂತೆ ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದರು.
ಕೂಡಲೇ ಪ್ರತಿಕ್ರಯಿಸಿದ ನ್ಯಾಯಮೂರ್ತಿಗಳು, ‘ಏನ್ರೀ ಇದು? ಅರ್ಜಿ ಸಂಬಂಧ ದಾಖಲೆ ಎಲ್ಲಿದೆ? ಪ್ರತಿ ಬಾರಿ ನೀವು ದಾವೆ ಹೂಡುವಾಗ ಯಾವುದೇ ದಾಖಲೆ ಸಲ್ಲಿಸುವುದಿಲ್ಲ. ಈ ತರನಾಗಿ ನ್ಯಾಯಾಲಯದ ಮೇಲೆ ಸವಾರಿ ಮಾಡಿದರೆ ಮುಂದಿನ ದಿನಗಳಲ್ಲಿ ನಿಮ್ಮ ಯಾವುದೇ ಅರ್ಜಿ ಪರಿಗಣಿಸುವ ಮಾತೇ ಇಲ್ಲ. ಇನ್ನುಮುಂದೆ ಜೈಲು ಅಧೀಕ್ಷಕರಿಂದ ವರದಿ ಲಭ್ಯವಾಗದೆ ಪರೋಲ್‌ಗಾಗಿ ಕೋರ್ಟ್ ಮೆಟ್ಟಿಲೇರುವ ಯಾವುದೇ ಅರ್ಜಿಯನ್ನು ಪರಿಗಣಿಸುವುದಿಲ್ಲ’ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತು.
ನೋಡಿ ನಿಮ್ಮೊಬ್ಬರಿಂದಾಗಿ ಎಲ್ಲರಿಗೂ ತೊಂದರೆ. ಜೈಲು ಪ್ರಾಧಿಕಾರಕ್ಕೆ ನೀವು ಇ-ಮೇಲ್ ಕಳುಹಿಸಿ ಸಂವಹನ ಮಾಡುತ್ತೀರಿ ಏಕೆ? ಅವರ ಕುಟುಂಬಸ್ಥರು ಮಾಡಬೇಕಾಗಿರುವ ಕೆಲಸದ ಗ್ಗೆ ನಿಮಗೆ ಯಾಕೆ ಈ ಪರಿ ಒಲವು? ಯಾಕಿಷ್ಟು ಆಸಕ್ತಿ? ಎಲ್ಲ ಪ್ರಕರಣದಲ್ಲೂ ನೀವೇ ಖುದ್ದು ಇ-ಮೇಲ್ ರವಾನಿಸಿದ್ದೀರಿ. ಆದರೆ, ಒಂದು ಪ್ರಕರಣದಲ್ಲೂ ವರದಿಯಿಲ್ಲ ಮತ್ತು ದಾಖಲೆಯಂತೂ ಕೇಳುವ ಮಾತೇ ಇಲ್ಲ. ಪರೋಲ್ ನೀಡುವಂತೆ ನಿಮ್ಮಿಂದ ಸಲ್ಲಿಕೆಯಾಗುವ ಅರ್ಜಿಯ ಸ್ಥಿತಿಗತಿ ನೋಡಿ ನನಗೂ ಸಾಕೆನಿಸಿಹೋಗಿದೆ. ಮನಬಂದಂತೆ ಒಂದು ಪುಟ ಅರ್ಜಿ ಸಲ್ಲಿಕೆ ಮಾಡುತ್ತೀರಿ, ಅದಕ್ಕೆ ನ್ಯಾಯಾಲಯ ಪರೋಲ್ ನೀಡಬೇಕು ಎಂದು ಬಯಸುತ್ತೀರಿ ಅಲ್ಲವೆ ಎಂದು ನ್ಯಾಯಪೀಠ ಖಾರವಾಗಿ. ಪ್ರಶ್ನೆ ಎತ್ತಿತು.
ಎಲ್ಲದಕ್ಕೂ ಮದುವೆ ಆಮಂತ್ರಣ ಪತ್ರ
ಎಲ್ಲದಕ್ಕೂ ಒಂದೇ ಮದುವೆ ಆಮಂತ್ರಣ ಪತ್ರ. ಕಳೆದ ವರ್ಷ ಅದೇ ಗಾಯ.. ಈ ಬಾರಿಯೂ ಅದೇ ನೆಪ. ಅಪರಾಧಿ ಹುಷಾರು ತಪ್ಪಿದನೋ.. ಅವರ ಅಪ್ಪ-ಅಮ್ಮನೋ ಎಲ್ಲಿಯೂ ಉಲ್ಲೇಖವಿಲ್ಲ. ಏನೋ ಸುಮ್ಮನೆ ಮನಬಂದಂತೆ ಅರ್ಜಿ ಹಾಕುತ್ತಲೇ ಇರುತ್ತೀರಿ. ಕಳೆದ ವರ್ಷ ವೈದ್ಯರು ನೀಡಿದ ಆರೋಗ್ಯ ಪ್ರಮಾಣ ಪತ್ರವನ್ನು ಈ ಬಾರಿಯೂ ಪರೋಲ್ ವಿಚಾರವಾಗಿ ನೀಡಿದ್ದೀರಿ. ನಾನು ಪರೋಲ್ ವಿಚಾರವಾಗಿ ಉದಾರವಾಗಿದ್ದೇನೆ ಎಂದು ಈ ತರನಾಗಿ ನ್ಯಾಯಾಲವನ್ನು ದುರ್ಬಳಕೆ ಮಾಡಿಕೊಳ್ಳುವುದೇ? ಮೊದಲು ನಿಮ್ಮ ತಪ್ಪು ಅರಿತು ತಿದ್ದಿಕೊಳ್ಳಿ. ಮತ್ತೆ ಬನ್ನಿ, ಆಗ ನಾನು ಪರೋಲ್ ನೀಡುವೆ. ಅದು ಸಾಧ್ಯವಿಲ್ಲ ಎಂದರೆ ಎಲ್ಲವನ್ನೂ ನಿಲ್ಲಿಸಿ ಸುಮ್ಮನಿದ್ದು ಬಿಡಿ ಎಂದು ಕಟುವಾಗಿ ನ್ಯಾಯಪೀಠ ನುಡಿದಿದೆ.
ಒಂದೇ ಅರ್ಜಿ!
ಪ್ರತಿಬಾರಿ ಪರೋಲ್‌ಗೆ ಅರ್ಜಿ ಸಲ್ಲಿಸುವಾಗ ಇದೇ ಗೋಳು. ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿದಿಲ್ಲದಿದ್ದರೆ ಇಲ್ಲೇ ವಕೀಲ ರವಿಶಂಕರ್ ಇದ್ದಾರೆ . ಒಮ್ಮೆ ಕೇಳಿ ಹೇಗೆ ಅರ್ಜಿ ಹೂಡಬೇಕೆಂದು. ಅವರು ಪರೋಲ್‌ಗೆ ಮನವಿ ಸಲ್ಲಿಸುವಂತೆ ಅರ್ಜಿ ಸಲ್ಲಿಸುವಾಗ ಎಲ್ಲ ಸಂಗತಿಗಳನ್ನು ಕೋಟ್ ಹಾಕಿ ಉಲ್ಲೇಖಿಸುತ್ತಾರೆ. ನಿಮ್ಮ ಅರ್ಜಿಯಲ್ಲಿ ಕಡ್ಡಾಯವಾಗಿ ಇರಬೇಕಾದ ಒಂದೇ ಒಂದು ಅಂಶವೂ ಇರುವುದಿಲ್ಲ. ಪ್ರತಿಬಾರಿ ನ್ಯಾಯಾಲಯದ ಕಣ್ಣಿಗೆ ವಣ್ಣೆರೆಚುವ ಕೆಲಸಕ್ಕೆ ಮುಂದಾಗುತ್ತೀರಿ. ಇದು ನಿಮಗೆ ಕಡೆಯ ಎಚ್ಚರಿಕೆ. ತುರ್ತು ಪರೋಲ್, ಸಾದಾ ಪರೋಲ್ ಯಾವುದೇ ಇರಲಿ ನಿಮ್ಮ ಅರ್ಜಿಗೆ ಒಂದೇ ರೀತಿ.. ಒಂದೇ ನೆಪ! ಬೇಕಾಬಿಟ್ಟಿ ದಾವೆ ಹೂಡಿ ನ್ಯಾಯಲಯವನ್ನು ದುರ್ಬಳಕೆ ಮಾಡಿಕೊಳ್ಳುವುದು ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.