ನವದೆಹಲಿ: ಗಡಿಗಳಲ್ಲಿ ಪಾಕಿಸ್ತಾನ ಮತ್ತು ಚೀನಾ ಎರಡೂ ರಾಷ್ಟ್ರಗಳು ಭಾರತದ ವಿರುದ್ಧ ಕಾಲ್ಕೆರೆದು ಜಗಳಕ್ಕೆ ಬರುತ್ತಿವೆ. ಎಲ್ಒಸಿ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದ್ದರೆ..ಅತ್ತ ಎಲ್ಎಸಿ ಬಳಿ ಚೀನಾ ಕ್ಯಾತೆ ಮುಂದುವರಿದೆ. ಭಾರತ-ಚೀನಾ ನಡುವೆ ಉನ್ನತ ಮಟ್ಟದ ಮಾತುಕತೆಯ ನಂತರವೂ ಗಡಿಯಲ್ಲಿ ಉದ್ವಿಘ್ನತೆ ಎಳ್ಳಷ್ಟೂ ಕಡಿಮೆಯಾಗಿಲ್ಲ.
ಹೀಗಿರುವಾಗ ಈ ವಿಚಾರವನ್ನು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಮಾಜಿ ಕೇಂದ್ರ ಸಚಿವ, ಜಮ್ಮುಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಚೀನಾದೊಂದಿಗೆ ಉಂಟಾಗಿರುವ ಭಿನ್ನಮತವನ್ನು ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನ ಮಾಡುವಂತೆ, ಪಾಕಿಸ್ತಾನದೊಂದಿಗೂ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗಿನಿಂದಲೂ ಗೃಹಬಂಧನದಲ್ಲಿದ್ದ ಫಾರೂಕ್ ಇಂದು ಮಾತನಾಡಿ, ಗಡಿಗಳಲ್ಲಿ ಸಂಘರ್ಷ ಹೆಚ್ಚುತ್ತಿದೆ. ಸಾವುನೋವಿನ ಪ್ರಮಾಣವೂ ಅಧಿಕವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕು. ಚೀನಾದೊಂದಿಗೆ ಮಾತುಕತೆ ನಡೆಸುತ್ತಿರುವಂತೆ ಮತ್ತೊಂದು ನೆರೆರಾಷ್ಟ್ರದೊಂದಿಗೂ ಮಾತುಕತೆಗೆ ಮುಂದಾಗಬೇಕು ಎಂದಿದ್ದಾರೆ.
ಹಾಗೇ ಶೋಪಿಯಾನಾ ಎನ್ಕೌಂಟರ್ನಲ್ಲಿ ಮೂವರು ಮುಗ್ಧರನ್ನು ಕೊಂದಿದ್ದಾಗಿ ಭಾರತೀಯ ಸೇನೆ ಒಪ್ಪಿಕೊಂಡ ಬಗ್ಗೆ ಖುಷಿಯಿದೆ. ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)