ನ್ಯೂಸ್

ನನಗೆ ಬೆದರಿಕೆ ಇರುವುದು ಮುಖ್ಯಮಂತ್ರಿಯಿಂದ ಮಾತ್ರ.. ಬಿಜೆಪಿ ಅಧ್ಯಕ್ಷರ ಹೇಳಿಕೆ..

ತಿರುವನಂತಪುರ: ನನಗೆ ಬೆದರಿಕೆ ಏನಾದರೂ ಇದ್ದರೆ ಅದು ಮುಖ್ಯಮಂತ್ರಿಯಿಂದ ಮಾತ್ರ ಎಂಬುದಾಗಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಹೇಳಿಕೊಂಡಿದ್ದಾರೆ.

ನನಗೆ ಯಾರಿಂದಲೂ ಬೆದರಿಕೆ ಇಲ್ಲ. ಹಾಗೇನಾದರೂ ಇದ್ದರೆ ಅದು ಮುಖ್ಯಮಂತ್ರಿಯಿಂದ ಮಾತ್ರ. ನಾನು ಯಾವ ಭದ್ರತೆಯನ್ನೂ ಕೇಳಿಲ್ಲ, ನನಗೆ ಯಾವ ಸೆಕ್ಯುರಿಟಿಯೂ ಬೇಡ ಎಂಬುದಾಗಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಸುರೇಂದ್ರನ್​, ಅಲ್ಲಿನ ಪೊಲೀಸರಿಗೆ ಪ್ರತಿಕ್ರಿಯಿಸಿದ್ದಾರೆ.

ಸಶಸ್ತ್ರ ಭದ್ರತೆಯನ್ನು ನೀಡುವ ಕುರಿತು ಕೇರಳ ಪೊಲೀಸರು ಸಂಪರ್ಕಿಸಿದಾಗ ಸುರೇಂದ್ರನ್​ ಈ ಸ್ಪಷ್ಟನೆ ನೀಡಿದ್ದಾರೆ. ಕೋವಿಡ್​-19 ನಿರ್ವಹಣೆ ಹಿನ್ನೆಲೆಯಲ್ಲಿ ಸುರೇಂದ್ರನ್​ ಎತ್ತಿದ್ದ ವಿಚಾರದ ಬಗ್ಗೆ ಈ ತಿಂಗಳ ಆರಂಭದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಅಸಹನೆಯಿಂದ ಪ್ರತಿಕ್ರಿಯಿಸಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​, 'ಅವರನ್ನು(ಸುರೇಂದ್ರನ್) ಸರಿಯಾದ ರೀತಿಯಲ್ಲಿ ವಿಚಾರಿಸಿಕೊಳ್ಳಲಾಗುವುದು, ಅದು ಸುದ್ದಿಗೋಷ್ಠಿ ಮೂಲಕವಲ್ಲ..' ಎಂದು ಹೇಳಿದ್ದರು. ಸಿಎಂ ವಿಜಯನ್​ ಅವರ ಈ ಹೇಳಿಕೆ ಬಗ್ಗೆ ಕೇರಳದ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಒಂದು ದಿನ ಸಿಎಂ ವಿಜಯನ್​ ನನಗೆ ಬೆದರಿಕೆವೊಡ್ಡುತ್ತಾರೆ. ಮರುದಿನ ನನಗೆ ಭದ್ರತೆ ನೀಡಲಾಗುತ್ತದೆ. ಏನಾಗುತ್ತಿದೆ ಎಂಬುದು ನನಗೆ ನಿಜಕ್ಕೂ ಅರ್ಥವಾಗುತ್ತಿಲ್ಲ ಎಂದು ಸುರೇಂದ್ರನ್​ ಹೇಳಿದ್ದಾರೆ. (ಏಜೆನ್ಸೀಸ್​)