ರಾಣೆಬೆನ್ನೂರ: ಮನುಷ್ಯ ಗುರುವಿನ ದಯೆ ಹೊಂದಿದ್ದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಜೀವನದ ಯಾವುದೆ ಕ್ಷೇತ್ರದಲ್ಲಿಯೂ ಗುರುವಿನ ಮಾರ್ಗದರ್ಶನ ಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಚನ್ನೇಶ್ವರ ಮಠದಲ್ಲಿ ಹೊನ್ನಾಳಿ ಚೆನ್ನಮಲ್ಲಿಕಾರ್ಜುನ ಸ್ವಾಮಿ ಸಂಸತಿ ಪ್ರಸಾರ ಪರಿಷತ್ ವತಿಯಿಂದ ಮಂಗಳವಾರ ಸಂಜೆ ಏರ್ಪಡಿಸಿದ್ದ ಲಿಂ. ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಯವರ ಯುಗಮಾನೋತ್ಸವ ಹಾಗೂ ಪಂಚಾಂಗ ಶ್ರವಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಇಂದಿನ ಮಕ್ಕಳಿಗೆ ಸಂಸ್ಕಾರದ ಅವಶ್ಯಕತೆ ಇದೆ. ಸಾಧು ಸಂತರ ಶರಣರ ಜೀವನ ಕಥೆಗಳನ್ನು ಮಕ್ಕಳಿಗೆ ಮನೆಯಲ್ಲಿ ಹೇಳುವ ಅವಶ್ಯಕತೆ ಇಂದಿನ ತಾಯಂದಿರಿಗೆ ಇದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿ.ಎಸ್. ಹಿರೇಮಠ, ಕಂದಾಯ ನಿರೀಕ್ಷಕ ವಾಗೀಶಸ್ವಾಮಿ ಮಳೇಮಠ, ರಾಜೇಂದ್ರಕುಮಾರ ತಿಳವಳ್ಳಿ, ಡಾ. ಜ್ಯೋತಿ ಜಂಬಗಿ, ರಜನಿ ಕರಿಗಾರ, ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ಗಾಯತ್ರಮ್ಮ ಕುರುವತ್ತಿ, ವಿ.ವಿ. ಹರಪನಹಳ್ಳಿ, ಕಸ್ತೂರಮ್ಮ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.