ಶಿವಮೊಗ್ಗ ವಿನೋಬನಗರ ಕಲ್ಲಹಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ ವಾರಾಣಸಿಯ ಜಂಗಮವಾಡಿ ಮಠದ ಸಿಂಹಾಸನಾಧೀಶ್ವರ ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ದಿನದರ್ಶಿಕೆ ಬಿಡುಗಡೆಗೊಳಿಸಿದರು. ಶ್ರೀ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ, ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರಿ, ರುದ್ರಾರಾಧ್ಯ, ಡಾ. ಮಲ್ಲಿಕಾರ್ಜುನ ಡಂಬಳ, ಚಂದ್ರಯ್ಯ ಇದ್ದರು. 
ನ್ಯೂಸ್

ಗುರುಕೃಪೆ ಇದ್ದರೆ ದೇವರ ದರ್ಶನ

ಶಿವಮೊಗ್ಗ: ಎಲ್ಲರಿಗಿಂತ ದೊಡ್ಡವರು ಸುಖಿಗಳೆಂಬ ಕಲ್ಪನೆ ಸಹಜ. ಎಲ್ಲ ವಿಚಾರದಲ್ಲೂ ದೊಡ್ಡದನ್ನು ನಾವು ಬಯಸುತ್ತಿದ್ದೇವೆ. ಆದರೆ ಅದ್ಯಾವುದೂ ದೊಡ್ಡದಲ್ಲ. ಬ್ರಹ್ಮಚೈತನ್ಯ, ಶಿವ ಚೈತನ್ಯವೇ ಜಗತ್ತಿನಲ್ಲಿ ಅತ್ಯಂತ ದೊಡ್ಡದು ಎಂದು ವಾರಾಣಸಿಯ ಜಂಗಮವಾಡಿ ಮಠದ ಸಿಂಹಾಸನಾಧೀಶ್ವರ ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ವಿನೋಬನಗರ ಕಲ್ಲಹಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ ಭಾನುವಾರ ಶ್ರೀ ಪರಮಹಂಸ ಅಥರ್ವ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ 22ನೇ ವಾರ್ಷಿಕೋತ್ಸವ ಹಾಗೂ ಡಾ. ಎಂ.ಈಶ್ವರ ರೆಡ್ಡಿ ಅವರ 75ನೇ ಜನ್ಮದಿನೋತ್ಸವ ನಿಮಿತ್ತ ಶಿವತತ್ವ ಚಿಂತನೆ ಕುರಿತು ಪ್ರವಚನ ನೀಡಿದರು.

ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ರೂಪದಲ್ಲಿ ಕಾಣುವುದು ಶಿವನೇ ಆಗಿದ್ದಾನೆ. ಜಗತ್ತಿನಲ್ಲಿ ಪೂಜೆ ಮಾಡಲಾರದ ವಸ್ತುಗಳೇ ಇಲ್ಲ. ಕಲ್ಲು, ಗಿಡ ಪೂಜೆ ಮಾಡುವುದು ಮೂಢನಂಬಿಕೆ ಎಂದು ಹೇಳುತ್ತಾರೆ. ಆದರೆ ಎಲ್ಲದರಲ್ಲೂ ದೇವರನ್ನು ಕಾಣುವುದೇ ನಿಜವಾದ ಭಕ್ತಿ, ಶಕ್ತಿ ಎಂದರು.

ದೃಷ್ಟಿ ಶಿವಮಯವಾದರೆ ಸೃಷ್ಟಿಯೂ ಶಿವಮಯವಾಗಿರುತ್ತದೆ. ಜಗತ್ತಿನಲ್ಲೆಲ್ಲವೂ ಶಿವನೇ ಇದ್ದಾನೆ. ದೇವರನ್ನು ಕಾಣಲು ಗುರುಬೇಕು. ಬಹಳಷ್ಟು ಮಂದಿ ಮಂದಿರದಲ್ಲಿ ಮಾತ್ರ ದೇವರನ್ನು ಕಾಣುತ್ತಾರೆ. ಆದರೆ ಎಲ್ಲೆಡೆ ದೇವರು ಕಾಣುವುದಕ್ಕೆ ಗುರುಕೃಪೆ ಬೇಕಾಗುತ್ತದೆ. ಯಾರಿಗೆ ಗುರುಕೃಪೆ ಇರುತ್ತದೋ ಅವರಿಗೆ ದೇವರು ಒಲಿಯಲಿದ್ದಾನೆ. ದುಷ್ಟರ ಸಂಹಾರಕ್ಕಾಗಿ ದೇವರ ಅವತಾರ ಎತ್ತುತ್ತಾನೆ ಎಂದು ಹೇಳಿದರು.

ಜಗತ್ತು ಹುಟ್ಟಿದಾಗಿನಿಂದ ಮಾಡಿದ ಪಾಪ ಕರ್ಮಗಳು ಬೆಟ್ಟದಷ್ಟು ಇರುತ್ತವೆ. ಅವುಗಳನ್ನು ಕಳೆದುಕೊಳ್ಳುವುದು ಸುಲಭವಲ್ಲ. ದಿವ್ಯ ಜ್ಞಾನ, ಆತ್ಮಜ್ಞಾನವನ್ನು ಪಡೆದುಕೊಂಡವರು ಮಾತ್ರ ಪಾಪಕರ್ಮಗಳನ್ನು ಕಳೆದುಕೊಳ್ಳುವರು. ಎಲ್ಲ ಕರ್ಮಗಳ ಫಲವನ್ನು ಅನುಭವಿಸಿದ ಮೇಲೆ ಶುದ್ಧವಾಗುತ್ತಾನೆ ಎಂದ ಅವರು, ಎಲ್ಲ ಕ್ಷೇತ್ರ ತಿರುಗಾಡಿದ ಕಾಲಭೈರವನು ಕೊನೆಗೆ ಕಾಶಿ ಕ್ಷೇತ್ರಕ್ಕೆ ಬಂದು ದೋಷಮುಕ್ತನಾಗುತ್ತಾನೆ. ಅಂದಿನಿಂದ ಇಂದಿನವರೆಗೆ ಕಾಲಭೈರವ ಕಾಶಿಯಲ್ಲೇ ನೆಲೆಸಿದ್ದಾನೆ ಎಂದರು.

ಅಹಂಕಾರ ಎಂಬುದು ಕೆಟ್ಟದು. ಸಂಪತ್ತು, ವಿದ್ಯೆ, ಅಧಿಕಾರದಿಂದ ಅಹಂಕಾರ ಬರುತ್ತದೆ. ಅಹಂಕಾರ ಅಧಃಪತನಕ್ಕೆ ಕಾರಣವಾಗಲಿದೆ. ನಾನು ಎಂದು ಬದುಕುವುದೇ ಅಹಂ. ಸಂಪತ್ತು, ಅಧಿಕಾರ, ವಿದ್ಯೆ ಬಂದರೂ ನೀನು, ನೀವು ಎಂಬ ಭಾವನೆ ಮೂಡಬೇಕು. ಅಹಂಕಾರ ಎನ್ನುವುದು ಸಂಸಾರದಲ್ಲಿ ಮತ್ತಷ್ಟು ಬಂಧನದಲ್ಲಿರಿಸುತ್ತದೆ. ಅಹಂ ಎನ್ನುವುದು ಆತ್ಮ. ಆತ್ಮವೇ ಪರಮಾತ್ಮ. ಅಹಂಕಾರ ನಾಶ ಮಾಡಿಕೊಳ್ಳದಿದ್ದರೆ ಶಿವನನ್ನು ಒಲಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಇದೇ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮಹಾಲಿಂಗ ಶಾಸ್ತ್ರಿ ಸಾರಥ್ಯದ ದಿನದರ್ಶಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕರ ಹಾಗೂ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ವೇದಘೋಷ ಪಠಿಸಿದರು. ರೋಣ ತಾಲೂಕು ಜಕ್ಕಲಿ ಮಠ ಹಾಗೂ ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.