ಬೈಲಕುಪ್ಪೆ: ಪ್ರತಿ ಗ್ರಾಮದಲ್ಲೂ ಒಂದೊಂದು ದೇವಾಲಯವಿದ್ದರೆ ಆ ಗ್ರಾಮದಲ್ಲಿ ಸದಾ ಶಾಂತಿ ನೆಲೆಸಿರುತ್ತದೆ. ಪ್ರತಿಯೊಬ್ಬರೂ ಆಧ್ಯಾತ್ಮಿಕ ಚಿಂತನೆಯಲ್ಲಿ ಸಾಗುತ್ತಾರೆ. ದೇವರ ಕೃಪೆಯಿಂದ ಸಕಾಲಕ್ಕೆ ಮಳೆ ಬೆಳೆ ಆಗುತ್ತದೆ ಎಂದು ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಚನ್ನಕೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ 1.50 ಲಕ್ಷ ರೂ. ಚೆಕ್‌ಅನ್ನು ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರಿಗೆ ವಿತರಿಸಿ ಮಾತನಾಡಿದರು.
ಯುವ ಸಮೂಹ ಧಾರ್ಮಿಕ ನೆಲೆಗಟ್ಟಿನಿಂದ ದೂರವಾಗಿ ಆಧುನೀಕರಣದತ್ತ ಮುಖ ಮಾಡುತ್ತಿದ್ದಾರೆ. ಈ ಭೂಮಿಯ ಮೇಲೆ ದೈವ ಸಂಕಲ್ಪ ಇಲ್ಲದೆ ಯಾವುದೂ ನಡೆಯುವುದಿಲ್ಲ. ದೇವಾಲಯಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಕಂಕಣಬದ್ಧವಾಗಿದೆ. ಇದನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಂಡು ದೇವಾಲಯಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮಿತಿ ಅಧ್ಯಕ್ಷ ನಂದೀಶ್ ರಾವ್ ಮಾತನಾಡಿದರು. ಯೋಜನೆ ಮೇಲ್ಮಿಚಾರಕರಾದ ಪ್ರೇಮಾ, ಸೇವಾ ಪ್ರತಿನಿಧಿ ಪದ್ಮಾ, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾ, ಸದಸ್ಯರಾದ ಬಸವರಾಜು, ನಾರಾಯಣ, ಹರಿಣಿ, ಗ್ರಾಮದ ಮುಖಂಡರಾದ ಡಿ.ಕೆ.ಗಿರೀಶ್, ಶ್ರೀಕಂಠಯ್ಯ, ಪ್ರಭುಸ್ವಾಮಿ, ಜಯಣ್ಣ, ಸಿದ್ದಪ್ಪ, ದೇವಾಲಯದ ಪ್ರಧಾನ ಅರ್ಚಕ ಅನಂತಪದ್ಮನಾಭ ಹಾಗೂ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.