ಹೊಸಪೇಟೆಯಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಎಂ.ಶ್ರುತಿ ಮಳ್ಳಪ್ಪಗೌಡ್ರಗೆ ಕರ್ನಾಟಕ ಪ್ರಾಂತ ರೈತ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು. ಸಂಘಟನೆಯ ಸಂಚಾಲಕ ಯಲ್ಲಲಿಂಗ, ಪ್ರಮುಖರಾದ ರಾಮಾಂಜಿನಿ, ರಾಮು, ಮಂಜುನಾಥ, ಈರಣ್ಣ, ಜಿ.ಹನುಮಪ್ಪ, ಕಣಿವೆಪ್ಪ ಇತರರಿದ್ದರು. 
ನ್ಯೂಸ್

ಪಟ್ಟಾ ನೀಡದಿದ್ದರೆ ವಿಧಾನಸೌಧ ಚಲೋ

ಹೊಸಪೇಟೆ: ವಿವಿಧ ಕಾಯ್ದೆಗಳಡಿ ಸಲ್ಲಿಸಿರುವ ಅರ್ಜಿಗಳಿಗೆ ಪಟ್ಟಾ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆಯಿಂದ ನಗರದ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಶ್ರುತಿ ಮಳ್ಳಪ್ಪಗೌಡ್ರಗೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಸಂಚಾಲಕ ಯಲ್ಲಲಿಂಗ ಮಾತನಾಡಿ, ಭೂರಹಿತ ರೈತರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಜಮೀನು ಸಕ್ರಮೀಕರಣಕ್ಕಾಗಿ ವಿವಿಧ ಕಾಯ್ದೆಗಳಡಿ ಅರ್ಜಿ ಸಲ್ಲಿಸಿದ್ದಾರೆ. ಬಗರ್ ಹುಕುಂ ಸಮಿತಿ ಸಕ್ರಮೀಕರಣ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಪರಿಶೀಲಿಸಿ ರೈತರಿಗೆ ನೋಟಿಸ್ ಜಾರಿ ಮಾಡಿ ಸಮಿತಿ ಮುಂದೆ ಹೇಳುವ ಅವಕಾಶ ಸಿಗುತ್ತಿತ್ತು. ರೈತರ ಹೇಳಿಕೆ ತಾಳೆಯಾದರೆ ಮಂಜೂರು ಇಲ್ಲವೇ ತಿರಸ್ಕಾರ ಅಥವಾ ಹೆಚ್ಚಿನ ಮಾಹಿತಿಗೆ ಅವಕಾಶ ಕಲ್ಪಿಸಿ ಅರ್ಜಿಗಳನ್ನು ತಡೆಹಿಡಿಯ ಬಹುದಿತ್ತು.

ಬದಲಾಗಿ ಅರ್ಜಿದಾರರ ಹೇಳಿಕೆ ದಾಖಲಿಸದೆ ಏಕಾಏಕಿ ತಿರಸ್ಕರಿಸಿದ ತಹಸೀಲ್ದಾರ್ ನಡೆ ನ್ಯಾಯ ಸಮ್ಮತವಲ್ಲ. ಬಗರ್‌ಹುಕುಂ ಅರ್ಜಿಗಳನ್ನು ಪರಿಶೀಲಿಸುವಾಗ 1990ರ ಪೂರ್ವದ ಸಾಗುವಳಿ ದಾಖಲೆಗಳ ಪ್ರಕಾರ ಭೂಹೀನರು ದಲಿತರು ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಂತರ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಸೌಲಭ್ಯ ಪಡೆಯಲು ಸಲ್ಲಿಸಿದ ಅರ್ಜಿಗಳಿಗೆ ಮುಖ್ಯಮಂತ್ರಿ ಅವರು ರೈತರಿಗೆ ತೊಂದರೆ ಕೊಡದೆ ಪಟ್ಟಾ ನೀಡಬೇಕು ಎಂದು ಹೇಳಿದ್ದಾರೆ. ಆದರೆ, ಅರಣ್ಯ ಸಚಿವ ಈಶ್ವರ ಖಂಡ್ರೆ ಪರಿಶೀಲಿಸಿ ಅರ್ಜಿಗಳನ್ನು ಕೈಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಸಾವಿರಾರು ಅರ್ಜಿಗಳು ಇತ್ಯರ್ಥವಾಗದೆ ಅರಣ್ಯ ಹಕ್ಕಿನಿಂದ ವಂಚಿತರನ್ನಾಗಿ ಮಾಡಬಹುದು. ಆದ್ದರಿಂದ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿ ಭೂಮಿ ಹಂಚಿಕೆ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.