ಮಾನಗಾರಿನಲ್ಲಿ ಶ್ರೀ ಭಾರತೀ ಬಾಲಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಕೃತ ಭಾರತೀ ಜಿಲ್ಲಾಧ್ಯಕ್ಷ ಡಾ. ಮಹೇಶ್ ಕಾಕತ್ಕರ್ ಅವರು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ. ಸಿ.ಎಸ್.ಎಸ್.ಎನ್.ಮೂರ್ತಿ ಅವರನ್ನು ಗೌರವಿಸಿದರು. ವಿಶ್ವಕ್ಸೇನ ಇದ್ದರು.  
ನ್ಯೂಸ್

ಸಮಾಜ ಸ್ವಸ್ಥವಾಗಿದ್ದರೆ ವ್ಯಕ್ತಿತ್ವ ವಿಕಸನ

ಶೃಂಗೇರಿ: ಬಾಲಕಿಯರು ಸಂಸ್ಕಾರ ಹಾಗೂ ಸಂಸ್ಕೃತಿಯ ಅರಿವು ಪಡೆದರೆ ಮಾತ್ರ ಸಮಾಜ ಸುಸಂಸ್ಕೃತವಾಗುತ್ತದೆ. ಎಲ್ಲಿ ಸುಸಂಸ್ಕೃತ ವ್ಯಕ್ತಿತ್ವಗಳು ಇರುತ್ತವೆಯೋ ಅಲ್ಲಿ ಸ್ವಸ್ಥ ಸಮಾಜ ನಿರ್ಮಾಣವಾಗಿ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಮೆಣಸೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ. ಸಿ.ಎಸ್.ಎಸ್.ಎನ್.ಮೂರ್ತಿ ತಿಳಿಸಿದರು.

ಪಟ್ಟಣದ ಮಾನಗಾರಿನಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಸಂಸ್ಕೃತ ಭಾರತೀ ಸಹಯೋಗದಲ್ಲಿ ಶನಿವಾರ ಶ್ರೀ ಭಾರತೀ ಬಾಲಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಸಣ್ಣವಯಸ್ಸಿನಲ್ಲೇ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಪರಿಮೂಡಿಸುವ ಅಗತ್ಯವಿದೆ. ಅದರಲ್ಲೂ ಬಾಲಕಿಯರಿಗೆ ಇಂತಹ ಶಿಕ್ಷಣ ದೊರಕಿ ಅವರು ಗೃಹಿಣಿಯಾದಾಗ ತಮ್ಮ ಮಕ್ಕಳಿಗೂ ಸಂಸ್ಕಾರದ ಮೌಲ್ಯ ಹೇಳಿಕೊಡುವಲ್ಲಿ ಯಶಸ್ವಿಯಾಗುತ್ತಾರೆ. ಶೃಂಗೇರಿ ಸಂಸ್ಕೃತ ಗ್ರಾಮ ಎಂಬುದು ಜಗದ್ಗುರುಗಳ ಪ್ರಮುಖ ಆಶಯ. ಪರಿಸರದ ಜನಸಾಮಾನ್ಯರಿಗೂ ಸಂಸ್ಕೃತ ಭಾಷೆಯ ಶಿಬಿರ ಆಯೋಜಿಸುವ ಮಹತ್ಕಾರ್ಯದಲ್ಲಿ ನಮ್ಮ ವಿಶ್ವವಿದ್ಯಾಲಯ ನಿರಂತರ ಕೈಜೋಡಿಸಲಿದೆ ಎಂದರು.
ಸಂಸ್ಕೃತ ಭಾರತೀ ಜಿಲ್ಲಾಧ್ಯಕ್ಷ ಡಾ. ಮಹೇಶ್ ಕಾಕತ್ಕರ್ ಮಾತನಾಡಿ, ಅಪರಾಧಿಗಳಿಗೆ ಶಿಕ್ಷೆ ನೀಡುವ ಮೊದಲು ಅಪರಾಧಕ್ಕೆ ಮೂಲ ಕಾರಣವಾದ ಕಾಮ, ಕ್ರೋಧ, ಮದ, ಮತ್ಸರ ಇತ್ಯಾದಿ ಅರಿಷಡ್ವರ್ಗಗಳ ವಿರುದ್ಧ ನಾವು ಗೆಲ್ಲಬೇಕು. ಇದಕ್ಕೆ ಬಾಲ್ಯದಲ್ಲೇ ನಮ್ಮ ಹಿರಿಯರು ನೀಡುವ ಸಂಸ್ಕಾರ ಪ್ರಾಮುಖ್ಯ ಪಡೆಯುತ್ತದೆ ಎಂದು ಹೇಳಿದರು.
ಬಾಲಕೇಂದ್ರದಲ್ಲಿ ಸಂಸ್ಕೃತ ಭಾಷೆ ಹಾಗೂ ಸಂಸ್ಕಾರಕ್ಕೂ ಆದ್ಯತೆ ನೀಡಿ ಪ್ರತಿ ಶನಿವಾರ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು. ಆಧುನಿಕ ಭರಾಟೆಯಲ್ಲಿ ನಾವು ಭಾರತೀಯ ಸಂಸ್ಕೃತಿಯ ಮೌಲ್ಯ ಮರೆತರೆ ಮುಂದಿನ ಭವಿಷ್ಯದ ಬೆಳಕಾದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವರು ಯಾರು ಎಂಬ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕು. ನಾವು ಬದಲಾಗಬೇಕು. ಮಕ್ಕಳಿಗೆ ಉನ್ನತ ಮೌಲ್ಯ ನೀಡುವ ಸತ್ಕಾರ್ಯವನ್ನು ಬಾಲ ಕೇಂದ್ರದ ಮೂಲಕ ಮುನ್ನಡೆಸಬೇಕು. ಶಿಕ್ಷಣದ ಜತೆಗೆ ಅಭಿನಯ, ಹಾಡು ಮತ್ತಿತರ ಚಟುವಟಿಕೆಗಳು ಇಲ್ಲಿ ನಡೆಯಲಿವೆ ಎಂದು ತಿಳಿಸಿದರು.
30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಂದ್ರಕ್ಕೆ ದಾಖಲಾಗಿದ್ದಾರೆ. ಬಾಲಕೇಂದ್ರದ ಜ್ಯೋತಿ ಕಾಕತ್ಕರ್, ಶಿಕ್ಷಕಿಯರಾದ ವಿಧಾತ್ರಿ, ರುಚಾ, ವಿದ್ವಸೇನಾ, ವಿಶ್ವಕ್ಸೇನ ಇತರರಿದ್ದರು.