ನಿರ್ಮಲ ತುಂಗಭದ್ರಾ ಅಭಿಯಾನದ ಭಾಗವಾಗಿ ಯುವ ಜಾಗೃತಿ ಕಾರ್ಯಕ್ರಮವನ್ನು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಡಿ.ಎಸ್.ಅರುಣ್, ಪಟ್ಟಾಭಿರಾಮ್, ಕಡಿದಾಳ್ ಗೋಪಾಲ್ ಇದ್ದರು.  
ನ್ಯೂಸ್

ನದಿ ಉಳಿದರೆ ಸಂಸ್ಕೃತಿಯೂ ರಕ್ಷಣೆ: ಬೆಕ್ಕಿನ ಕಲ್ಮಠ ಶ್ರೀ

ಶಿವಮೊಗ್ಗ: ನದಿ ಎಂಬುದು ಸಂಸ್ಕೃತಿಯ ಮೂಲ. ಎಲ್ಲ ನಾಗರಿಕತೆಗಳೂ ಅರಳಿದ್ದು ನದಿಯ ತಟದಲ್ಲಿ. ಹೀಗಾಗಿ ನದಿಯನ್ನು ಸಂರಕ್ಷಿಸಿದರೆ ನಮ್ಮ ಸಂಸ್ಕೃತಿಯನ್ನು ರಕ್ಷಿಸಿದಂತೆಯೇ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಿರ್ಮಲ ತುಂಗಭದ್ರಾ ಅಭಿಯಾನದ ಭಾಗವಾಗಿ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಯುವ ಜಾಗೃತಿ ಸಮಾವೇಶ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಿಂಧೂ ನದಿ, ಕಾವೇರಿ, ಗಂಗಾ, ತುಂಗಭದ್ರಾ ಸೇರಿದಂತೆ ಅನೇಕ ನದಿಗಳು ನಾಗರಿಕತೆಯನ್ನು ಬೆಳೆಸಿವೆ ಎಂದರು.

ನೀರು, ಬೆಳಕು, ಗಾಳಿ ಎಲ್ಲವೂ ದೇವರು ನೀಡಿರುವ ವರ. ಜೀವನದುದ್ದಕ್ಕೂ ನಾವು ಇದೆಲ್ಲವನ್ನೂ ಬಳಸುತ್ತೇವೆ. ಹಾಗೆಂದು ನಾವು ಇದಾವುದಕ್ಕೂ ಹಣ ಪಾವತಿಸುವುದಿಲ್ಲ. ಎಲ್ಲವೂ ಉಚಿತವಾಗಿ ನಮಗೆ ಸಿಗುವಂಥದ್ದು. ನಾವು ಇದನ್ನು ಬಳಸಿದ ನಂತರ ಮುಂದಿನ ಪೀಳಿಗೆಗೆ ಪ್ರಕೃತಿ ಸಂಪತ್ತನ್ನು ಸುಸ್ಥಿತಿಯಲ್ಲಿ ದಾಟಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಇಂದು ತುಂಗಾ ನದಿ ಮೇಲೆ ಬಹಳಷ್ಟು ಅಪಚಾರ ಎಸಗಿದ್ದೇವೆ. ತುಂಗಾ ಪಾನದ ಶ್ರೇಷ್ಠತೆಯನ್ನು ಈಗ ಖಚಿತವಾಗಿ ಹೇಳದ ಸ್ಥಿತಿಯಿದೆ. ಈ ಕಾಲಘಟದಲ್ಲಿ ತುಂಗೆಯನ್ನು ಉಳಿಸಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿಯನ್ನೂ ಉಳಿಸುವ ಅನಿವಾರ್ಯತೆ ಇದೆ. ತುಂಗಾ ಹಾಗೂ ಭದ್ರೆಯರ ಉಳಿವಿಗಾಗಿ ಆರಂಭಿಸಿರುವ ಅಭಿಯಾನ ಸಮಯೋಚಿತವಾಗಿದೆ ಎಂದು ಅಭಿಪ್ರಾಯಪಟ್ಟರು.

ಸದೃಢ ಯುವಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲರು ಎಂಬುದು ಸ್ವಾಮಿ ವಿವೇಕಾನಂದರ ಬಲವಾದ ನಂಬಿಕೆಯಾಗಿತ್ತು. ಈ ನಿಟ್ಟಿನಲ್ಲಿ ಇಂದು ಇಲ್ಲಿ ಸೇರಿರುವ ಕಾಲೇಜು ವಿದ್ಯಾರ್ಥಿಗಳು ಭವಿಷ್ಯದಲ್ಲಿ ನದಿ ಹಾಗೂ ಪ್ರಕೃತಿ ಸಂಪತ್ತಿನ ಸಂರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ.ಕುಮಾರಸ್ವಾಮಿ, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮುಂತಾದವರಿದ್ದರು.