ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಲೊಕಾಯುಕ್ತ ಬಿ.ಎಸ್.ಪಾಟೀಲ್ ಅವರನ್ನು ಸನ್ಮಾನಿಸಿದರು. ಎಸ್.ಆರ್.ಗೋಪಾಲ್, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಅಶೋಕಕುಮಾರ್, ನಾಗರಾಜ್ ಘೋರೆ, ರಘುಪತಿ, ಅರ್ಪುದ ಸ್ವಾಮಿ, ರವಿಶಂಕರ್, ಚನ್ನವೀರಪ್ಪ ಗಾಮನಗಟ್ಟಿ, ವಿರೂಪಾಕ್ಷ, ಚಿರಂಜೀವಿ ಬಾಬು ಇದ್ದರು. 
ನ್ಯೂಸ್

ಸಮಸ್ಯೆಗೆ ಸ್ಪಂದಿಸದಿದ್ದರೆ ಅಧಿಕಾರಿಗಳನ್ನೇ ಪಾರ್ಟಿ ಮಾಡಿ ದೂರು ಕೊಡಿ

ಶಿವಮೊಗ್ಗ: ಕರ್ನಾಟಕ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರ ಎದುರು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಫುಟ್‌ಪಾತ್ ಒತ್ತುವರಿ, ಪಾರ್ಕಿಂಗ್ ಅವ್ಯವಸ್ಥೆ ಸೇರಿ ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟರು. ಇದಕ್ಕೆ ಪ್ರತಿಯಾಗಿ ಸಾರ್ವಜನಿಕರಿಗೆ ಸ್ಪಂದಿಸದ ಅಧಿಕಾರಿಗಳನ್ನೇ ಪಾರ್ಟಿಯನ್ನಾಗಿ ಮಾಡಿ ದೂರು ನೀಡುವಂತೆ ಲೋಕಾಯುಕ್ತರು ಒಕ್ಕೂಟಕ್ಕೆ ಸಲಹೆ ನೀಡಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿ ನಗರದ ಪ್ರವಾಸಿ ಮಂದಿರ ವಾಸ್ತವ್ಯ ಹೂಡಿದ್ದ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಸಾರ್ವಜನಿಕರ ಹಲವು ಸಮಸ್ಯೆಗಳ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಹಾಗಾಗಿ ತಾವು ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕು. ನಗರದ ಸೌಂದರ್ಯ, ಸ್ವಚ್ಛತೆ ಸೇರಿ ಹಲವು ಸಮಸ್ಯೆಗಳನ್ನು ಸರಿಪಡಿಸಲು ತಾವೇ ಅಧಿಕಾರಿಗಳಿಗೆ ಛಾಟಿ ಬೀಸಬೇಕೆಂದು ಮನವಿ ಮಾಡಿದರು.

ನಗರದ ಕನ್ಸರ್ವೆನ್ಸಿಗಳಲ್ಲಿ ಶೆಡ್ ನಿರ್ಮಾಣ ಮಾಡಿದ್ದಾರೆ. ವಾಹನಗಳ ಪಾರ್ಕಿಂಗ್ ಹಾಗೂ ಬೀದಿಬದಿ ವ್ಯಾಪಾರದ ವಲಯಕ್ಕೆ ಗುರುತಿಸಿದ ಜಾಗ ಬಲಾಢ್ಯರ ಪಾಲಾಗಿದ್ದರೂ ಪಾಲಿಕೆ ಮೌನ ವಹಿಸಿದೆ. ಸೂಡಾದಿಂದ ಸಾರ್ವಜನಿಕ ರಸ್ತೆಯಲ್ಲಿ ನೌಕರರ ವಾಹನ ಪಾರ್ಕಿಂಗ್‌ಗೆ ಶೆಡ್ ನಿರ್ಮಿಸಲಾಗಿದೆ. ಸ್ಮಾರ್ಟ್‌ಸಿಟಿಯಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಇ-ಶೌಚಾಗೃಹ ಸಾರ್ವಜನಿಕರ ಬಳಕೆಗೆ ಇಲ್ಲವಾಗಿವೆ. 24*7 ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕವಾಗಿದೆ. ನಗರದ ನಾಗರಿಕರಿಗೆ ಕುಡಿಯಲು ಸಮರ್ಪಕವಾಗಿ ನೀರು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರ ಓಡಾಟಕ್ಕೆ ಪುಟ್‌ಪಾತ್ ಇಲ್ಲ. ಎಲ್ಲ ಕಡೆ ಅತಿಕ್ರಮಣವಾಗಿದೆ. ಸಾರ್ವಜನಿಕರು ತಿನ್ನುವ ಆಹಾರಗಳಿಗೆ ಸುರಕ್ಷತೆ ಇಲ್ಲ. ಎಫ್‌ಎಸ್‌ಎಸ್‌ಎಐ(ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ)ನ ಅಧಿಕಾರಿಗಳು ಅದನ್ನು ಗಮನಿಸುತ್ತಿಲ್ಲ. ರಸ್ತೆಯುದ್ದಕ್ಕೂ ಗುಂಡಿಗಳು ಜನರ ಪ್ರಾಣವನ್ನು ತೆಗೆಯಲು ಕಾಯುತ್ತಿವೆ. ಕುಡಿಯುವ ನೀರು ಶುದ್ಧೀಕರಣ ಘಟಕವು ಅವ್ಯವಸ್ಥೆ ಆಗರವಾಗಿದೆ ಎಂದು ದೂರಿದರು.

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಸಂಘಟನಾ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಶೋಕಕುಮಾರ್, ನಾಗರಾಜ್ ಘೋರೆ, ರಘುಪತಿ, ಅರ್ಪುದ ಸ್ವಾಮಿ, ರವಿಶಂಕರ್, ಚನ್ನವೀರಪ್ಪ ಗಾಮನಗಟ್ಟಿ, ವಿರೂಪಾಕ್ಷ, ಚಿರಂಜೀವಿ ಬಾಬು ಇತರರಿದ್ದರು.

ವರದಿ ನೀಡುವಂತೆ ಸೂಚನೆ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ಪಾರ್ಟಿಯನ್ನಾಗಿ ಮಾಡಿ ದೂರು ನೀಡುವಂತೆ ಒಕ್ಕೂಟದ ಪದಾಧಿಕಾರಿಗಳಿಗೆ ಸೂಚಿಸಿದ ಲೋಕಾಯುಕ್ತರು, ಪ್ರವಾಸಿ ಮಂದಿರದಿಂದ ಹೊರಡುವಾಗ ಇಬ್ಬರು ಮಹಿಳಾ ಅಂಗವಿಕಲರನ್ನು ಕಂಡು ಸಮಸ್ಯೆ ಆಲಿಸಿ ತಕ್ಷಣವೇ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು. ಆ ವರದಿ ಕಳುಹಿಸುವಂತೆ ಶಿವಮೊಗ್ಗ ತಹಸೀಲ್ದಾರ್ ರಾಜೀವ್ ಅವರಿಗೆ ಸೂಚನೆ ನೀಡಿದರು.