ಕೋಲಾರ ನಗರಸಭೆ ಜಮೀನು ಸಂಬಂದ ತಹಶೀಲ್ದಾರ್​ ಡಾ.ನಯನ ಅವರೊಂದಿಗೆ ಚರ್ಚಿಸುತ್ತಿರುವ ಪೌರಾಯುಕ್ತ ಪ್ರಸಾದ್​, ಸದಸ್ಯ ಪ್ರವಿಣ್​ ಗೌಡ. 
ನ್ಯೂಸ್

ಜಮೀನು ರಕ್ಷಿಸದಿದ್ದರೆ ಕೋರ್ಟ್​ಗೆ ಮೋರೆ..?

ಕಿರುವಾರ ಎಸ್​.ಸುದರ್ಶನ್​ ಕೋಲಾರ

ತಾಲೂಕಿನ ಖಾದ್ರಿಪುರ ಗ್ರಾಮದ ಸಮೀಪ ನಗರಸಭೆಗೆ ಸೇರಿದ್ದ ಜಮೀನು ಖಾಸಗಿ ವ್ಯಕ್ತಿಗಳು ಪರಭಾರೆ ಮಾಡಿಕೊಂಡಿರುವ ಕುರಿತು, ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಮೋರೆ ಹೋಗಲು ದೂರುದಾರ ಮುಂದಾಗಿದ್ದಾರೆ.

ಈ ಸಂಬಂಧ ಈಗಾಗಲೇ ಪೌರಾಯುಕ್ತ ಎಸ್​.ಪ್ರಸಾದ್​ ಅವರಿಗೆ ದೂರು ನೀಡಿದ್ದು, ದಾಖಲೆಗಳ ತಿದ್ದುಪಡಿ, ನಕಲಿ ದಾಖಲೆ ಸೃಷ್ಟಿ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದು, ಪೊಲೀಸ್​ ಠಾಣೆಗೆ ದೂರು ನೀಡಲು ಸಿದ್ದತೆ ನಡೆಸಿದ್ದಾರೆ.

ನಗರದಲ್ಲಿ ನಿವೇಶನ, ವಸತಿ ರಹಿತರು ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಯಿದ್ದಾರೆ. ಅವರಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ನಗರಸಭೆಯಲ್ಲಿ ಆಶ್ರಯ ಸಮಿತಿ ಯೋಜನೆಯಡಿ ಉದ್ದೇಶಿಸಲಾಗಿತ್ತು. ಅದರ ಪ್ರಕಾರ ನಗರಕ್ಕೆ ಹೊಂದಿಕೊಂಡಿರುವ ಖಾದ್ರಿಪುರ ಸಮೀಪ ಖಾಸಗಿ ಜಮೀನು ಗುರುತಿಸಲಾಯಿತು.

ಜಮೀನು ಖರೀದಿ ಮಾಡಲು ಆಶ್ರಯ ಸಮಿತಿ ಜಿಲ್ಲಾಡಳಿತಕ್ಕೆ ಅನುಮತಿಗಾಗಿ ಪತ್ರ ಬರೆದು ಕೋರಲಾಗಿತ್ತು. ಅದಕ್ಕೆ ತಕ್ಕಂತೆ ಅಂದಿನ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಅದರಂತೆ 2000 ನವೆಂಬರ್​ 28ರಂದು ಸಭೆ ನಡೆಸಿ ಜಮೀನು ಖರೀದಿ ಮಾಡಲು ರ್ನಿಣಯಕೈಗೊಳ್ಳಲಾಗಿತ್ತು. ಜಾಗ ಗುರುತಿ ಮಾಡಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದಿಸಿದ ಸರ್ಕಾರವು 2022 ಜನವರಿ 15ರಂದು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

ಆಗಿನ ಕಾಲಕ್ಕೆ ತಕ್ಕಂತೆ ಹಣ ಪಾವತಿ ಮಾಡಿದ್ದರು ಸಹ, ಈಗ ಅದರ ಮೌಲ್ಯ ಸುಮಾರು 6 ಕೋಟಿ ರೂ.ಗೂ ಹೆಚ್ಚಿದೆ. ಆಶ್ರಯ ಸಮಿತಿ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು, ಆಡಳಿತ ಮಂಡಳಿ, ಪೌರಾಯುಕ್ತರು ಜಮೀನನ್ನು ಭದ್ರಪಡಿಸಿಕೊಳ್ಳಲು ಮುಂದಾಗದೆ ಇರುವುದು ಈಗ ನಗರಸಭೆ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗುವಂತಾಗಿದೆ.

ಖಾದ್ರಿಪುರ ಸರ್ವೇ ನಂ&29ರ ಪೈಕಿ 1 ಎಕರೆ 19 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗಳು ಮಾರಾಟ ಮಾಡಿಕೊಂಡಿರುವ ಬಗ್ಗೆ ಬೆಳಕಿಗೆ ಬಂದಿದ್ದು, ನಗರಸಭೆ ಸದಸ್ಯ ಪ್ರವಿಣ್​ ಗೌಡ ಜಮೀನನ್ನು ನಗರಸಭೆ ಆಸ್ತಿಯನ್ನಾಗಿ ಉಳಿಸಲು ಹೋರಾಟಕ್ಕೆ ಇಳಿದಿದ್ದಾರೆ.

ಸ್ಥಳಿಯ ಸಂಸ್ಥೆಗಳಲ್ಲಿ ಅಧಿಕಾರಿಗಳು, ಚುನಾಯಿತ ಸಮಿತಿ ಸದಸ್ಯರು ಬದಲಾಯಿದ್ದಾರೆ. ಆದರೆ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ಕ್ರಮವಹಿಸದೆ ಇರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ.

* ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳು

ನಗರಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ, ನಗರಸಭೆಗೆ ಸೇರಿದ ಆಸ್ತಿಗಳು ಎಷ್ಟಿವೆ, ಅದನ್ನು ರಕ್ಷಣೆ ಮಾಡಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು, ಆಸ್ತಿಗಳ ಜಾಗದ ಗಡಿ ಗುರುತಿಸಿ ಬೇಸಿ ನಿರ್ಮಿಸಿ ಬೋರ್ಡ್​ ಅಳವಡಿಸಲು ಸಾಕಷ್ಟು ಸಭೆಗಳಲ್ಲಿ ಸದಸ್ಯರು ಒತ್ತಾಯಿಸಿದ್ದರು.

ನಗರಸಭೆ ಆಸ್ತಿಗಳು ಎಷ್ಟಿವೆ ಎಂಬುದಕ್ಕೆ ಶ್ವೇತ ಪತ್ರ ಹೊರಡಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್​ ಅಹಮದ್​, ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​ ಅವರು ಪಾಲ್ಗೊಂಡಿದ್ದ ಸಭೆಗಳಲ್ಲೂ ಸದಸ್ಯರು ಧ್ವನಿ ಎತ್ತಿದ್ದರು.

ಸದಸ್ಯರ ಧ್ವನಿಯನ್ನು ಗಂಭೀರವಾಗಿ ಪರಿಗಣಿಸಿದ ಜನಪ್ರತಿನಿಧಿಗಳು ಕಂದಾಯ ಹಾಗೂ ನಗರಸಭೆ ಅಧಿಕಾರಿಗಳು ಜಂಟಿ ಸೇರ್ವೆ ಮಾಡಿ ಆಸ್ತಿಗಳನ್ನು ರಕ್ಷಣೆ ಮಾಡಲು ಸೂಚಿಸಿದ್ದರು. ಆಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ ಇಂತಹ ಪ್ರಕರಣಗಳನ್ನು ತಡೆಯಬಹುದಿತ್ತು ಎಂಬುದು ಸದಸ್ಯರ ವಾದವಾಗಿದೆ.

* ಭೂಗಳ್ಳರ ಕಣ್ಣು ಬಿದ್ದಿದ್ದು ಹೇಗೆ...?

ನಗರ ಭಾಗದಲ್ಲಿ ಜಮೀನುಗಳ ಬೆಲೆಯೂ ಗಗನಕ್ಕೇರಿದ್ದು, ಭೂ ದಾಖಲೆಗಳನ್ನು ತಿದ್ದುಪಡಿ ಮಾಡುವುದು, ನಕಲಿ ದಾಖಲೆ ಸೃಷ್ಟಿ ಮಾಡುವುದು ವ್ಯಾಪಕವಾಗಿ ನಡೆಯುತ್ತಿದೆ. ಇದೇ ರೀತಿ ಖಾದ್ರಿಪುರ ಜಮೀನು ದಾಖಲೆಗಳು ಆಗಿದ್ದು, ರಕ್ಷಣೆ ಮಾಡಲು ಅಧಿಕಾರಿಗಳು ತಡವಾಗಿ ಆದರೂ ಮುಂದಾಗಿದ್ದಾರೆ.

ಮಾಲೀಕರು ಸುಮಾರು ವರ್ಷಗಳಿಂದ ಜಮೀನುಗಳಲ್ಲಿ ಯಾವುದೇ ರೀತಿ ಚಟುವಟಿಕೆಗಳನ್ನು ನಡೆಸದೆ ಇರುವಂತಹ ಜಮೀನುಗಳನ್ನು ಹುಡುಕಿ ಕೆಲ ಭೂಗಳ್ಳರು ಕಬಳಿಸುವ ಪ್ರಯತ್ನ ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ.

* ಗಲ್​ಪೇಟೆ ಠಾಣೆಗೆ ದೂರು

ಆಶ್ರಯ ಯೋಜನೆಯಡಿ ಖಾದ್ರಿಪುರ ಗ್ರಾಮದ ಬಳಿ 1.19 ಗುಂಟೆ ಜಾಗ ಮಂಜೂರಾಗಿರುತ್ತದೆ. ಈ ಸಂಬಂಧ ಯಾರಿಗೂ ನೋಂದಣಿ ಮಾಡಬಾರದು ಎಂದು ನಗರಸಭೆಯಿಂದ ಹಿಂದಿನ ಪೌರಾಯುಕ್ತರು ಪತ್ರ ಬರೆದಿರುತ್ತಾರೆ.

ನಗರಸಭೆಯಿಂದ ಯಾವುದೇ ಇಲಾಖೆಗೆ ಪತ್ರ ಬರೆಯಬೇಕಾದರೆ ವಿನಾಯಿತಿ ಇರುತ್ತದೆ, ಆದರೆ ಅದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಗಲ್​ಪೇಟೆ ಸಬ್​ಇನ್ಸ್​ಪೆಕ್ಟರ್​ ಅವರಿಗೂ ದೂರು ನೀಡಿದ್ದು, ಕ್ರಿಮಿನಲ್​ ಪ್ರಕರಣ ದಾಖಲಿಸಿ ದಾಖಲೆ ತಿದ್ದಿರುವವರ ವಿರುದ್ಧ ಕ್ರಮಕೈಗೊಳ್ಳಲು ಕೋರಲಾಗಿದೆ ಎಂದು ಪೌರಾಯುಕ್ತ ಎಸ್​.ಪ್ರಸಾದ್​ ತಿಳಿಸಿದ್ದಾರೆ.

ಆದರೆ ಕೆಲವರು ದಾಖಲೆಗಳನ್ನು ತಿದ್ದು, ಪುರಸಭೆ ಲೇಟರ್​ ಹೆಡ್​ ಪತ್ರದಲ್ಲಿ ನೋಂದಾಣಿ ಕಚೇರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ ಇದರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

ಕೋಟ್​...

ಖಾದ್ರಿಪುರ ಸಮೀಪದ ನಗರಸಭೆಯ ಆಸ್ತಿಯ ಸಂಬಂಧ ಈಗಾಗಲೇ ದೂರು ನೀಡಲಾಗಿದೆ. ಸೋಮವಾರವೇ ಸ್ಥಳಕ್ಕೆ ಭೇಟಿ ನೀಡಿ ಜಾಗವನ್ನು ನಗರಸಭೆ ವಶಕ್ಕೆ ಪಡೆಯಲಾಗುವುದು. ಅದೇ ರೀತಿ ನಗರಸಭೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಆಸ್ತಿಗಳನ್ನು ಗುರುತಿಸಿ ರಕ್ಷಣೆ ಮಾಡುವ ಸಲುವಾಗಿ ವಿಶೇಷ ತಂಡ ರಚನೆ ಕ್ರಮವಹಿಸಲಾಗುವುದು.

- ಎಸ್​.ಪ್ರಸಾದ್​, ಪೌರಾಯುಕ್ತ, ನಗರಸಭೆ, ಕೋಲಾರ.

ಕೋಟ್​..

ಸರ್ಕಾರಿ ಆಸ್ತಿಗಳನ್ನು ಉಳಿಸಿ ರಕ್ಷಣೆ ಮಾಡಬೇಕಾಗಿರುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ನಾವು ದಾಖಲೆಗಳನ್ನು ಹುಡುಕಿ ದೂರು ನೀಡುವಂತಾಗಿದೆ. ಖಾದ್ರಿಪುರ ಜಮೀನು ವಿಚಾರದಲ್ಲಿ ಕ್ರಮಕ್ಕೆ ಮುಂದಾಗದಿದ್ದರೆ ಅಧಿಕಾರಿಗಳನ್ನು ಎದುರುದಾರರನ್ನಾಗಿ ಮಾಡಿ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಧಾವೆ ಹೂಡುತ್ತೇನೆ.

- ಪ್ರವಿಣ್​ಗೌಡ, ನಗರಸಭೆ ಸದಸ್ಯ.