ಬೆಂಗಳೂರು: ತನಿಖೆಗೆ ಅಡ್ಡಿಪಡಿಸಿದರೆ ಅವರದ್ದೇ ಆದ ರೀತಿಯಲ್ಲಿ ಪೊಲೀಸರು ಕ್ರಮವಹಿಸುತ್ತಾರೆ. ನಡವಳಿಕೆ ಕೈಪಿಡಿ, ವೃಂದ ನಿಯಂತ್ರಣ ನಿಯಮಾವಳಿ ಪ್ರಕಾರ ಕಾರ್ಯನಿರ್ವಹಿಸುತ್ತಾರೆ. ದೊಡ್ಡವರ ಮಾತನ್ನು ಐಪಿಎಸ್ ಚಂದ್ರಶೇಖರ ರಾವ್ ಉಲ್ಲೇಖಿಸಿದ್ದಾರೆ. ನೇರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಉದ್ದೇಶಿಸಿ ಹೇಳಿದ್ದಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಐರಿಷ್ ಲೇಖಕ ಜಾರ್ಜ್ ಬರ್ನಾರ್ಡ್ ಷಾ ಮಾತನ್ನು ಚಂದ್ರಶೇಖರರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರಷ್ಟೇ. ಗಾದೆ, ದೊಡ್ಡವರ ಮಾತುಗಳನ್ನು ಆಗಾಗ್ಗೆ ಎಲ್ಲರೂ ಹೇಳುವುದು ಸಹಜ. ಕುಮಾರಸ್ವಾಮಿಯವರು ಇದನ್ನು ತಮಗೆ ಏಕೆ ಅನ್ವಯಿಸಿಕೊಳ್ಳಬೇಕು. ಅಪ್ಲಿಕೇಷನ್ ಆಫ್ ಮೈಂಡ್ ಕೂಡ ಅಷ್ಟೇ ಮುಖ್ಯವೆಂದು ಸಮಜಾಯಿಷಿ ನೀಡಿದರು.
ಸಾಮಾಜಿಕ ದೂರುದಾರ ಸ್ನೇಹಮಯಿಕೃಷ್ಣ ಅವರು ಮುಡಾ ಪ್ರಕರಣದ ಸಿಬಿಐ, ಇ.ಡಿ. ತನಿಖೆ ಕೋರಿ ದೂರು ನೀಡಿದ್ದಾರೆ. ಮುಂದೇನು ನಿರ್ದೇಶನ, ಸೂಚನೆ ಬರುತ್ತವೆಯೋ ಕಾದು ನೋಡೋಣ. ಸಿಬಿಐ ತನಿಖೆಗಿದ್ಸ ಮುಕ್ತ ಅವಕಾಶ ವಾಪಸ್ ಪಡೆದದ್ದು ಹೊಸದೇನಲ್ಲ. ಅನೇಕ ರಾಜ್ಯಗಳಲ್ಲೂ ಇಂತಹ ಕ್ರಮಗಳಾಗಿವೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ದಿನಬೆಳಗಾದರೆ ರಾಜಕೀಯ ದ್ವೇಷದ ಕ್ರಮವೆಂದು ಇತ್ತೀಚೆಗೆ ಕೇಳಿಬರುತ್ತಿದೆ. ಹೀಗೆ ಸಾರ್ವಜನಿಕ ಜೀವನ ಕಲುಷಿತವಾದರೆ ಕಷ್ಟ, ಕಷ್ಟ. ಸ್ನೇಹಮಯಿಕೇಷ್ಣ ಅವರ ವಿರುದ್ಧದ ಹಳೆಯ ಕೇಸ್ ಮತ್ತೆ ಕೆದಕಿ ಪ್ರಕರಣ ದಾಖಲಿಸಿಕೊಂಡಿದ್ದರೆ ಕಾನೂನು, ನ್ಯಾಯಾಂಗ ವ್ಯವಸ್ಥೆಯಿದೆ. ಇಂತಹ ಪ್ರಕರಣಗಳನ್ನೆಲ್ಲ ಅದು ನೋಡಿಕೊಳ್ಳುತ್ತದೆ ಎಂದರು.
ಜಾತಿ ಗಣತಿ ವರದಿ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಹೇಳಿರುವುದು ಗಮನಿಸಿದ್ದು, ಹೆಚ್ಚಿನ ವಿವರಗಳು ನನಗೆ ತಿಳಿದಿಲ್ಲ. ಸರ್ಕಾರ ಕೆಡವಲು ಸಾವಿರ ಕೋಟಿ ರೂ ಕೂಡಿಟ್ಟಿದ್ದಾರೆ ಎಂಬ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ನೀಡಿದ್ದು ಗೊತ್ತಿಲ್ಲ. ಕೂಡಿಟ್ಟವರು ಯಾರು ಎಂದು ಅವರನ್ನೇ ಕೇಳಬೇಕು, ಆ ಬಗ್ಗೆ ಮಾಹಿತಿ ನೀಡಿದರೆ ಪೊಲೀಸರು ತನಿಖೆ ಮಾಡುತ್ತಾರೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.