ಬೆಂಗಳೂರು: ಈಗಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದವರಲ್ಲಿ ಶಾಮನೂರು ಶಿವಶಂಕರಪ್ಪ ಕೂಡ ಒಬ್ಬರಾಗಿದ್ದು, ಏನಾದರೂ ಸಮಸ್ಯೆಗಳಿದ್ದರೆ ನೇರವಾಗಿ ಸಿಎಂ ಬಳಿ ಚರ್ಚಿಸುವುದಕ್ಕೆ ಯಾರದೇ ಅಡೆತಡೆಗಳಿಲ್ಲ ಎಂದು ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.
ಲಿಂಗಾಯತರಿಗೆ ಸಿಎಂ ಪದವಿ, ಲಿಂಗಾಯತ ಅಧಿಕಾರಿಗಳ ತಾಪತ್ರಯ ಕುರಿತು ಶಾಮನೂರು ಶಿವಶಂಕರಪ್ಪ ಧ್ವನಿ ಎತ್ತಿದ್ದರತ್ತ ಸುದ್ದಿಗಾರರು ಶನಿವಾರ ಗಮನಸೆಳೆದಾಗ ಕೆ.ಎಚ್.ಮುನಿಯಪ್ಪ ಉತ್ತರಿಸಿ, ರಾಜ್ಯದ 224 ಶಾಸಕರೂ ಸಿಎಂ ಆಗುವುದಕ್ಕೆ ಅರ್ಹರಿದ್ದಾರೆ ಎಂಬ ಸಮಜಾಯಿಷಿ ನೀಡಿದರು.
ಮುಖ್ಯಮಂತ್ರಿ ವಿಷಯದ ಚರ್ಚೆಯೇ ಈಗ ಅಪ್ರಸ್ತುತ. ನಮ್ಮಲ್ಲೇನೇ ಬದಲಾವಣೆಯಿದ್ದರೂ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಸರ್ಕಾರದಲ್ಲಿ ಎಲ್ಲವೂ ಸರಿಯಿದೆ, ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ಅಧಿಕಾರಿಗಳು ತೊಂದರೆ ಅನುಭವಿಸುತ್ತಿದ್ದರೆ ಶಾಮನೂರು ಅವರು ಮಂತ್ರಿಯಾಗಿರುವ ತಮ್ಮ ಪುತ್ರನಿಗೆ ಹೇಳಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ನಮ್ಮ ಪಕ್ಷ ಅಥವಾ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪಕ್ಷ ಗೌರವಿಸುತ್ತದೆ. ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಮುನಿಯಪ್ಪ ಸಮಜಾಯಿಷಿ ನೀಡಿದರು.