ನ್ಯೂಸ್

'ರಾಯರು' ಮನಸ್ಸು ಮಾಡಿದರೆ 'ಪ್ರಧಾನಿ'ಯನ್ನು ಕರೆಸಿಕೊಳ್ಳುತ್ತಾರೆ; ನಟ ಜಗ್ಗೇಶ್| Jaggesh

ಮಂತ್ರಾಲಯ; ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆಯ ಮಧ್ಯಾರಾಧನೆಯಲ್ಲಿ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಾಯರ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನಿ ಮೋದಿಯನ್ನು ಭೇಟಿಯಾಗಿ ದೇಶದಲ್ಲಿ ನಿಮಗೆ ಎಷ್ಟೋ ಬಳುವಳಿಗಳು ಬರುತ್ತವೆ. ರಾಯರ ಆಶಿರ್ವಾದ ಸಹ ಇರಲಿ ಎಂದು ಶಾಲು ಮತ್ತು ಮಂತ್ರಾಕ್ಷತೆ ನೀಡಿದೆ. ಇದಾಗಿ ಒಂದೇ ವಾರದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಒಂದು ಕಾರ್ಯಕ್ರಮದಲ್ಲಿ ರಾಯರನ್ನು ಕಲಿಯುಗದ ಕಲ್ಪವೃಕ್ಷ ಕಾಮಧೇನುಕಿ ಜೈ ಎಂದು ಸ್ಮರಿಸಿದರು. ರಾಯರು ಮನಸ್ಸು ಮಾಡಿದರೆ ಪ್ರಧಾನಿ ಮೋದಿಯನ್ನು ಮಂತ್ರಾಲಯಕ್ಕೆ ಕರೆಸಿಕೊಳ್ಳುತ್ತಾರೆ. ರಾಯರ ಶಕ್ತಿಯ ಮುಂದೆ ನಾವೆಲ್ಲಾ ಏನು ಇಲ್ಲ ಎಂದಿದ್ದಾರೆ.

ಕ್ಷೇತ್ರದಲ್ಲಿ ಏರೋಡ್ರಮ್ ನಿರ್ಮಾಣ ಮಾಡಲು ನಾನು ಮತ್ತು ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಸದನದಲ್ಲಿ ಇಟ್ಟಿದ್ದೇವೆ. ಮುಂದೊಂದು ದಿನ ಮಂತ್ರಾಲಯದಲ್ಲಿ ಏರೋಡ್ರಮ್ ಆಗುವ ನಿರೀಕ್ಷೆಯಿದೆ. ಕ್ಷೇತ್ರದಲ್ಲಿ ನೂತನವಾಗಿ ಪರಿಮಳ ತೀರ್ಥ ಪುಷ್ಕರಣಿ ನಿರ್ಮಾಣವಾಗಿರುವುದು ಖುಷಿಯಾಗಿದೆ. ಸಂಜೆ ನಡೆಯಲಿರುವ ತೆಪ್ಪೋತ್ಸವ ನೋಡಿ ಹೋಗಬೇಕು ಎಂದು ಶ್ರೀಗಳು ಸೂಚಿಸಿದ್ದಾರೆ. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಪರಿಶ್ರಮದಿಂದ ಮಂತ್ರಾಲಯಕ್ಕೆ ಹೈಟೆಕ್ ಟಚ್ ದೊರೆತಿದ್ದು, ರಾಯರ ಮಹಿಮೆಯನ್ನು ಅರಿತವರು ರಾಯರ ಮೂರ್ತಿಗಳನ್ನು ವಿದೇಶಗಳಲ್ಲೂ ಭಕ್ತರು ಪೂಜಿಸುತ್ತಿದ್ದಾರೆ ಎಂದು ಜಗ್ಗೇಶ್ ಹೇಳಿದ್ದಾರೆ.

ಇಂದಿಗೂ ರಾಯರು ವೃಂದಾವನದಲ್ಲಿ ತಮ್ಮ ಯೋಗ ಸಾಮರ್ಥ್ಯದಿಂದ ಸಶರೀರರಾಗಿದ್ದು, ಇಂದು ವಿಶೇಷವಾಗಿ ಭಕ್ತರನ್ನ ಅನುಗ್ರಹಿಸುತ್ತಾರೆ ಅನ್ನೋ ಪ್ರತೀತಿಯಿದೆ. ಈ ಹಿನ್ನೆಲೆ ಮಧ್ಯಾರಾಧನೆ ಎನ್ನುವುದು ಆರಾಧನಾ ಮಹೋತ್ಸವದಲ್ಲಿ ವಿಶೇಷವಾದದ್ದು. ಇನ್ನೂ ನೂತನವಾಗಿ ನಿರ್ಮಾಣವಾದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ರಾತ್ರಿ ವೇಳೆ ತೆಪ್ಪೋತ್ಸವ ಜರುಗಲಿದೆ.