ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಿನ್ನೆಲೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಾಗರದ ಭೀಮನಕೋಣೆ ಸೇವಾ ಸಹಕಾರ ಸಂಘದಿಂದ ಅಭಿನಂದಿಸಲಾಯಿತು. ಕೆ.ಕೆ.ರಾಜೇಶ್ ಕೇಡಲಸರ, ಎಚ್.ಕೆ.ಚೌಡಪ್ಪ, ಎಂ.ಎಸ್.ನಾಗರಾಜ್ ಇತರರಿದ್ದರು. 
ನ್ಯೂಸ್

ಹಣ ಲಪಟಾಯಿಸಿದರೆ ಸಂಘಗಳ ವಿರುದ್ಧ ಕ್ರಮ

ಸಾಗರ: ನಂಬಿಕೆ ಆಧಾರದಲ್ಲಿ ಸಹಕಾರ ಸಂಸ್ಥೆಗಳು ನಡೆಯುತ್ತಿದ್ದು, ಬಡವರ ಪಿಗ್ಮಿ ಹಣ, ಠೇವಣಿ ಹಣ ಗುಳುಂ ಮಾಡುವ ಸಹಕಾರ ಸಂಘಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲೂಕಿನ ಭೀಮನಕೋಣೆಯ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಭೀಮನಕೋಣೆ ಸೇವಾ ಸಹಕಾರ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಿನ್ನೆಲೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಕೆಲ ಸಹಕಾರ ಸಂಸ್ಥೆಗಳಲ್ಲಿ ಪಿಗ್ಮಿ, ಠೇವಣಿ ಇರಿಸಿರುವ ಹಣವನ್ನು ಅವ್ಯವಹಾರ ಮಾಡಿ ದೋಚಲಾಗಿದೆ. ಅಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಣ ಕಳೆದುಕೊಂಡವರಿಗೆ ವಾಪಾಸ್ ಕೊಡಿಸಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ಅವ್ಯವಹಾರ ಮಾಡಿದ ವ್ಯಕ್ತಿಗಳಿಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಜಿಲ್ಲಾ ಬ್ಯಾಂಕ್‌ನಿಂದ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ಕೊಡಿಸಲು ರೈತರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ರೈತರ ಸಂಪರ್ಕ ಹಾಗೂ ಸಹಕಾರ ಕ್ಷೇತ್ರದ ಹಿತ ಕಾಯುವ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್ ಮೂಲಕ ಸಹಕಾರ ಕ್ಷೇತ್ರ ಪ್ರವೇಶ ಮಾಡಿದ್ದೇನೆ. ಸಹಕಾರಿ ಕ್ಷೇತ್ರದಲ್ಲಿದ್ದರೆ ಕೃಷಿಕರು, ಹಿರಿಯ ಸಹಕಾರಿಗಳ ಆಲೋಚನೆಗಳಿಗೆ ಪೂರಕವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ. ಜಿಲ್ಲಾ ಸಹಕಾರ ಬ್ಯಾಂಕ್ ಮೂಲಕ ರೈತರಿಗೆ ಇನ್ನಷ್ಟು ಯೋಜನೆ ವಿಸ್ತರಿಸಲು ಚರ್ಚೆ ನಡೆಸುತ್ತೇನೆ ಎಂದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಹರನಾಥ ರಾವ್, ಜೀವವೈವಿಧ್ಯ ಮಂಡಳಿ ಪ್ರಶಸ್ತಿ ಪುರಸ್ಕೃತ ಕವಲಕೋಡು ವೆಂಕಟೇಶ್, ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಎಸ್.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸೊಸೈಟಿ ಅಧ್ಯಕ್ಷ ಕೆ.ಕೆ.ರಾಜೇಶ್ ಕೇಡಲಸರ, ಉಪಾಧ್ಯಕ್ಷ ಎಚ್.ಕೆ.ಚೌಡಪ್ಪ, ಎಂ.ಡಿ.ನಾಗರಾಜ ಭಟ್, ಪತ್ರಕರ್ತ ಎ.ಡಿ.ರಾಮಚಂದ್ರ ಭಟ್, ಹಿರಿಯ ಸಹಕಾರಿ ಸುಬ್ರಹ್ಮಣ್ಯ, ಕೆ.ಎಸ್.ಪ್ರಭಾಕರ್, ಸಿ.ಎನ್.ಪ್ರಿಯಾಂಕ, ಎಂ.ನಾಗರಾಜ್ ಇತರರಿದ್ದರು.