ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ಎಂ.ವಿ.ಸೀ ಭದ್ರ ಬುನಾದಿ ಹಾಕಿದರೆ; ತೇಜಸ್ವಿ ಘನತೆಯನ್ನು ನೀಡಿದ್ದು,ಈರ್ವರ ಕೊಡುಗೆ ಅಪಾರ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ. ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಎಂ.ವಿ.ಸೀತಾರಾಮಯ್ಯ(ರಾಘವ) ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತೇಜಸ್ವಿಯವರು ಕಥೆಗಾರರಾಗಿ ಪಡೆದ ಪ್ರಸಿದ್ಧಿಯ ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಕಾಲಿಟ್ಟು ಪರಿಸರ ಜ್ಞಾನದ ಬಗ್ಗೆ ಅನನ್ಯ ಕಾಳಜಿ ತೋರಿದವರು. ಕನ್ನಡದಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ ಪದವಿಗಳನ್ನು ಪಡೆದ ನಂತರ ಸ್ವತಂತ್ರ ಪ್ರವೃತ್ತಿಯ ಅವರು ಅಧ್ಯಾಪಕರಾಗಲು ಇಚ್ಛಿಸದೆ ಚಿಕ್ಕಮಗಳೂರಿನ ಮೂಡಿಗೆರೆ ಪರಿಸರದ ಕೃಷಿ ತೋಟದಲ್ಲಿ ಆಸಕ್ತಿ ತಳೆದು ನೆಲೆಸಿದರು. ಸ್ವಗತ ಲಹರಿ ಮತ್ತಿತರ ಕವಲ ಸಂಕಲನಗಳ ಜೊತೆಗೆ ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಳಿಗಳು, ಏರೋಪ್ಲೇನ್ ಚಿಟ್ಟೆ, ಮಿಸ್ಸಿಂಗ್ ಲಿಂಕ್ ಇತ್ಯಾದಿ ಕಥಾ ಸಂಗ್ರಹಗಳು ಪ್ರಮುಖವಾಗಿವೆ. ಮಾತ್ರವಲ್ಲದೆ ನಾಟಕ, ವೈಚಾರಿಕ ಪ್ರಬಂಧ, ಕಾದಂಬರಿ, ಪರಿಸರ ಕಥನ ಇತ್ಯಾದಿ ಎಲ್ಲ ಪ್ರಕಾರದ ಸಾಹಿತ್ಯಕ್ಕೂ ತೇಜಸ್ವಿಯವರ ಕೊಡುಗೆ ಇದೆ ಎಂದು ಜೋಶಿ ಸ್ಮರಿಸಿದರು.
ಪ್ರೊ. ಎಂ. ವಿ. ಸೀತಾರಾಮಯ್ಯನವರು ತಮ್ಮ ವಿದ್ವತ್ತು ಮತ್ತು ಸಂಶೋಧನೆಗಳಿಂದ ಪ್ರಸಿದ್ಧಯಾಗಿದ್ದು, ವ್ಯಾಕರಣ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾಗಿದೆ. ಹಳಗನ್ನಡದ ಶಬ್ದಮಣಿ ದರ್ಪಣ, ಕವಿರಾಜಮಾರ್ಗ ಗ್ರಂಥಗಳನ್ನು ಆಳವಾಗಿ ಅಧ್ಯಯನ ನಡೆಸಿ ಆ ಬಗ್ಗೆ ಮಾಹಿತಿ ಒದಗಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಡಾ.ಪದ್ಮಿನಿ ನಾಗರಾಜು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಮೀರಾಶಿವಲಿಂಗಯ್ಯ, ಮಂಡ್ಯ ಜಿಲ್ಲಾ ಕ.ಸಾ.ಪ ಕಾರ್ಯದರ್ಶಿ ಕೃಷ್ಣೇಗೌಡ ಹೊಸ್ಕೂರು, ಕಸಾಪ ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ನಿವೇದಿತಾ ಹೊನ್ನತ್ತಿ ಮತ್ತಿತರರು ಪಾಲ್ಗೊಂಡಿದ್ದರು.