Pope Francis : ತಮ್ಮ ವಿನಮ್ರ ನಡೆ ಮತ್ತು ಬಡವರ ಮೇಲಿನ ಕಾಳಜಿಯನ್ನು ಜೀವನದ ಧ್ಯೇಯವಾಗಿಟ್ಟುಕೊಂಡು ಇಡೀ ಜಗತ್ತನ್ನೇ ಆಕರ್ಷಿಸಿದ ಪೋಪ್ ಫ್ರಾನ್ಸಿಸ್ ತಮ್ಮ 88ನೇ ವಯಸ್ಸಿನಲ್ಲಿ ನಿನ್ನೆ (ಏಪ್ರಿಲ್ 21) ಕೊನೆಯುಸಿರೆಳೆದರು. ಯುದ್ಧ ಮತ್ತು ಅಶಾಂತಿಯನ್ನು ತೀವ್ರವಾಗಿ ವಿರೋಧಿಸಿ, ಕರುಣೆ, ಪ್ರೀತಿ, ಸೌಹಾರ್ದದ ದಾರಿಯಲ್ಲಿ ಸಾಗಲು ಕರೆ ನೀಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದ ಪೋಪ್ ಫ್ರಾನ್ಸಿಸ್, ಇಹಲೋಕ ತ್ಯಜಿಸಿರುವುದರಿಂದ ಈ ಜಗತ್ತು ಓರ್ವ ಶಾಂತಿದೂತನನ್ನು ಕಳೆದುಕೊಂಡಿದೆ.
ಪೋಪ್ ಫ್ರಾನ್ಸಿಸ್ ಅವರ ಆಳ್ವಿಕೆಯಲ್ಲಿ ಚರ್ಚ್ನಲ್ಲಿ ಸಾಕಷ್ಟು ಪರಿವರ್ತನೆ ಆಯಿತು. ಅಂದಹಾಗೆ ಫ್ರಾನ್ಸಿನ್ ಅವರು ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸಲು ಒಂದು ವೈಯಕ್ತಿಕ ಸಂಗತಿಯೇ ಕಾರಣ. ಆ ಒಂದು ಪತ್ರದ ನಿರಾಕರಣೆ ಫ್ರಾನ್ಸಿಸ್ ಅವರು ಹೃದಯಕ್ಕೆ ನೋವುಂಟು ಮಾಡಿತು. ಅಂದು ಆರಂಭವಾಯಿತು ಆಧ್ಯಾತ್ಮಿಕ ಜೀವನದತ್ತ ಸಾಗುವ ಅವರ ಪಯಣ.
ಪೋಪ್ ಫ್ರಾನ್ಸಿಸ್ ಅವರ ಪೂರ್ವದ ಹೆಸರು ಜಾರ್ಜ್ ಮಾರಿಯೊ ಬರ್ಗೆಗ್ಲಿಯೋ. ಅವರು 1936ರ ಡಿಸೆಂಬರ್ 17ರಂದು ಅರ್ಜೆಂಟೀನಾದ ಬ್ಯೂನೆಸ್ ಏರಿಸ್ನಲ್ಲಿ ಜನಿಸಿದರು. 2013, ಮಾರ್ಚ್ 13ರಂದು ಬೆನೆಡಿಕ್ಟ್ XVIರ ಉತ್ತರಾಧಿಕಾರಿಯಾಗಿ ವಿಶ್ವ ಕ್ಯಾಥೋಲಿಕ್ ಚರ್ಚ್‌ನ ನಾಯಕತ್ವವನ್ನು ವಹಿಸಿಕೊಂಡರು. ಅವರು ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಕೂಡನ ಹೌದು. ಅವರ ತಂದೆ ಮಾರಿಯೋ ಜೋಸ್ ಬರ್ಗೊಗ್ಲಿಯೊ ರೈಲ್ವೆ ನೌಕರರಾಗಿದ್ದರು. ಅವರ ತಾಯಿ ರೆಜಿನಾ ಸಿವೊರಿ.
ಬರ್ಗೆಗ್ಲಿಯೋ ಅವರು ಹದಿಹರೆಯದಲ್ಲಿ ಬ್ಯೂನೆಸ್ ಏರಿಸ್‌ನ ಮೆಂಬ್ರಿಲ್ಲರ್ ಸ್ಟ್ರೀಟ್‌ನಲ್ಲಿ ವಾಸವಿದ್ದಾಗ ತನ್ನ ನೆರೆಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆ ಹುಡುಗಿಯ ಹೆಸರು ಅಮಾಲಿಯಾ ಡಮೊಂಟೆ. ಇದೆಲ್ಲವೂ ಒಂದು ಪತ್ರದಿಂದ ಪ್ರಾರಂಭವಾಯಿತು. ಅಮಾಲಿಯಾಗೆ ಬರ್ಗೆಗ್ಲಿಯೋ ಅವರು ಪ್ರೇಮ ಪತ್ರವನ್ನು ನೀಡಿದ್ದರು. ಆದರೆ, ಅಮಾಲಿಯಾ ಅದನ್ನು ತಿರಸ್ಕರಿಸಿದರು. ಇದು ಬರ್ಗೆಗ್ಲಿಯೋ ಅವರಲ್ಲಿ ಖಿನ್ನತೆ ಮತ್ತು ಹೃದಯದಲ್ಲಿ ಭಾರಿ ನೋವನ್ನುಂಟುಮಾಡಿತು.
ದಶಕಗಳ ಹಿಂದೆ ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಅಮಾಲಿಯಾ ಅವರು ತಮ್ಮ ಪ್ರೇಮ ಪತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಬರ್ಗೆಗ್ಲಿಯೋ ಅವರು ಪತ್ರದ ಜೊತೆಗೆ ಕೆಂಪು ಛಾವಣಿಯಿರುವ ಸಣ್ಣ ಬಿಳಿ ಮನೆಯನ್ನು ಸಹ ಚಿತ್ರಿಸಿದ್ದರು. ಇಬ್ಬರು ಮದುವೆಯಾದಾಗ ಅದನ್ನು ಹೊಂದುವುದಾಗಿ ಪತ್ರದಲ್ಲಿ ಹೇಳಿದ್ದರು. ಒಂದು ವೇಳೆ ನಾನು ನಿನ್ನನ್ನು ಮದುವೆಯಾಗದಿದ್ದರೆ, ನಾನು ಪಾದ್ರಿಯಾಗುತ್ತೇನೆ ಎಂದು ಬರ್ಗೆಗ್ಲಿಯೋ ಬರೆದಿದ್ದರು ಎಂದು ಅಮಾಲಿಯಾ ಬಹಿರಂಗಪಡಿಸಿದರು.
ಪತ್ರದಲ್ಲಿರುವ ವಿಷಯಗಳು ತುಂಬಾ ಬಾಲಿಶವೆಂದು ಅಮಾಲಿಯಾ ಆ ಸಂದರ್ಭದಲ್ಲಿ ಭಾವಿಸಿದ್ದರು. ಹೀಗಾಗಿ ಆ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲ. ಆದರೆ, ಆ ಪತ್ರವು ಅಮಾಲಿಯಾರ ತಾಯಿಗೆ ಸಿಕ್ಕಿಬಿದ್ದಿತು. ಪತ್ರವನ್ನು ಓದಿದ ನಂತರ, ಅವರ ತಾಯಿ ಅದನ್ನು ಹರಿದು, ನಿನಗೆ ಒಬ್ಬ ಹುಡುಗನಿಂದ ಪ್ರೇಮ ಪತ್ರ ಬಂದಿದೆಯೇ? ಎಂದು ಕೇಳಿದರು. ಈ ಘಟನೆಯ ನಂತರ ಅಮಾಲಿಯಾ ಪಾಲಕರು ಇಬ್ಬರನ್ನು ದೂರವಿಡಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಮಾಡಿದರು ಎಂದು ಅಮಾಲಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.
ಹೀಗಿರುವಾಗ ಬರ್ಗೆಗ್ಲಿಯೋ ಅವರ ಕುಟುಂಬವು ಶೀಘ್ರದಲ್ಲೇ ಮೆಂಬ್ರಿಲ್ಲರ್ ಸ್ಟ್ರೀಟ್‌ನಿಂದ ಬೇರೆ ಕಡೆಗೆ ಸ್ಥಳಾಂತರವಾಯಿತು. ಅಮಾಲಿಯಾ ಮತ್ತು ಅವಳ ಕುಟುಂಬವು ಕೂಡ ಅಲ್ಲಿಂದ ಹೊರಟುಹೋಯಿತು. ಇದರ ನಡುವೆ ಅಮಾಲಿಯಾ ಬೇರೊಬ್ಬರನ್ನು ಮದುವೆಯಾಗಿ ಗೃಹಿಣಿಯಾದರು. ಆದರೆ, ಆಕೆ ಯಾವಾಗಲೂ ಫ್ರಾನ್ಸಿಸ್ರನ್ನು ನೆನಪಿಸಿಕೊಳ್ಳುತ್ತಿದ್ದರು. ಆದರೆ, ಎಂದಿಗೂ ಆ ಸಂಬಂಧವನ್ನು ಪುನಃಸ್ಥಾಪಿಸಲು ಪ್ರಯತ್ನಿಸಲಿಲ್ಲ ಎಂದು ಅಮಾಲಿಯಾ ಹೇಳಿದ್ದಾರೆ.
ಬರ್ಗೊಗ್ಲಿಯೊ ಅವರು ಪ್ರೌಢಶಾಲೆಯನ್ನು ಮುಗಿಸಿದ ನಂತರ, ಬ್ಯೂನೆಸ್ ಏರಿಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದೇ ಸಂದರ್ಭದಲ್ಲಿ ಪಾದ್ರಿಯಾಗಲು ಕರೆ ಬಂದಾಗ, ಅವರು ತಮ್ಮ ಗೆಳತಿಯ ನೆನಪುಗಳನ್ನು ಸಮಾಧಿ ಮಾಡಿದರು. ಬ್ಯೂನೆಸ್ ಏರಿಸ್‌ನ ಆರ್ಚ್‌ಬಿಷಪ್ ಆಗಿದ್ದಾಗಲೇ, ಬರ್ಗೊಗ್ಲಿಯೊ 2013ರಲ್ಲಿ ಕ್ಯಾಥೋಲಿಕ್ ಚರ್ಚ್‌ನ 266 ನೇ ಪೋಪ್ ಆಗಿ ಆಯ್ಕೆಯಾದರು. ಅವರು ಎಲ್ಲಾ ಐಷಾರಾಮಿ ಮತ್ತು ಸಂಪತ್ತನ್ನು ತ್ಯಜಿಸಿ ಹಸಿವು ಮತ್ತು ಬಡತನದಲ್ಲಿ ಜೀವನದ ಬೆಳಕನ್ನು ಕಂಡುಕೊಂಡ ಅಸ್ಸಿಸಿಯ ಫ್ರಾನ್ಸಿಸ್ ಎಂಬ ಹೆಸರನ್ನು ಪಡೆದರು. ಅವರು ಫ್ರಾನ್ಸಿಸ್ ಎಂಬ ಹೆಸರನ್ನು ಪಡೆದ ಮೊದಲ ಪೋಪ್ ಆಗಿದ್ದರು. (ಏಜೆನ್ಸೀಸ್)