ನ್ಯೂಸ್

ಹಮಾಸ್ ಸಂಪೂರ್ಣವಾಗಿ ಸೋತರೆ, ಯುದ್ಧ ಕೊನೆ: ಇಸ್ರೇಲ್​ ಪ್ರಧಾನಿ| Benjamin Netanyahu

Benjamin Netanyahu: ಇಸ್ರೇಲ್ ಗಾಜಾದಲ್ಲಿ ಕೆಲಸವನ್ನು ಮುಗಿಸಿ, ಹಮಾಸ್ ಅನ್ನು ಸಂಪೂರ್ಣವಾಗಿ ಸೋಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಧಾನಿ ನೆತನ್ಯಾಹು, ಕಳೆದ ವಾರ ಭದ್ರತಾ ಸಚಿವ ಸಂಪುಟವು ಗಾಜಾ ನಗರದಲ್ಲಿ ಮಾತ್ರವಲ್ಲದೆ ಕೇಂದ್ರ ಶಿಬಿರಗಳು ಮತ್ತು ಮುವಾಸಿ ಪ್ರದೇಶದಲ್ಲಿರುವ ಹಮಾಸ್ ಭದ್ರಕೋಟೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಮಿಲಿಟರಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ಗಾಜಾ ಸಂಪೂರ್ಣ ನಿಯಂತ್ರಣಕ್ಕೆ ಇಸ್ರೇಲ್ ಸಿದ್ಧತೆ

ಇಸ್ರೇಲ್‌ನ ಭದ್ರತಾ ಸಂಪುಟವು ಗಾಜಾವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮಿಲಿಟರಿಗೆ ಆದೇಶ ನೀಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಹಮಾಸ್ ಅನ್ನು ಸೋಲಿಸುವ ಮತ್ತು ಯುದ್ಧವನ್ನು ಕೊನೆಗೊಳಿಸುವ ಯೋಜನೆಯನ್ನು ಎಲ್ಲ ಸಚಿವರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ.

ಈ ಕ್ರಮದ ವಿರುದ್ಧ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ, ಗಾಜಾವನ್ನು ಪೂರ್ಣ ಪ್ರಮಾಣದ ಮಿಲಿಟರಿ ಸ್ವಾಧೀನಪಡಿಸಿಕೊಳ್ಳುವುದರಿಂದ ಪ್ಯಾಲೆಸ್ಟೀನಿಯನ್ ನಾಗರಿಕರು ಮತ್ತು ಆ ಪ್ರದೇಶದಲ್ಲಿ ಇನ್ನೂ ಬಂಧಿಸಲ್ಪಟ್ಟಿರುವ ಇಸ್ರೇಲಿ ಒತ್ತೆಯಾಳುಗಳ ಮೇಲೆ ವಿನಾಶಕಾರಿ ಪರಿಣಾಮಗಳು ಉಂಟಾಗಬಹುದು ತಿಳಿಸಿದೆ.

ಐಡಿಎಫ್ ದಾಳಿಯಲ್ಲಿ ಪತ್ರಕರ್ತರ ಸಾವು

ಭಾನುವಾರ ಗಾಜಾ ನಗರದಲ್ಲಿ ಐಡಿಎಫ್ ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ ಅಲ್ ಜಜೀರಾ ಸುದ್ದಿವಾಹಿನಿಯ 4 ವರದಿಗಾರರು ಸಾವನ್ನಪ್ಪಿದ್ದಾರೆ. ಶಿಫಾ ಆಸ್ಪತ್ರೆಯ ಆಡಳಿತ ನಿರ್ದೇಶಕರ ಪ್ರಕಾರ, ಆಸ್ಪತ್ರೆಯ ಹೊರಗೆ ಅಲ್ ಜಜೀರಾ ಪತ್ರಕರ್ತರ ಟೆಂಟ್ ಮೇಲೆ ದಾಳಿ ಮಾಡಲಾಗಿದೆ.

ಆದರೆ, ದಾಳಿಯಲ್ಲಿ ಸಾವನ್ನಪ್ಪಿದ ಅಲ್ ಜಜೀರಾ ವರದಿಗಾರ ಅನಾಸ್ ಅಲ್-ಶರೀಫ್, ಬರಹಗಾರನಂತೆ ನಟಿಸುತ್ತಿದ್ದು, ವಾಸ್ತವವಾಗಿ ಹಮಾಸ್ ಜೊತೆಗಿದ್ದನು ಎಂದು ಇಸ್ರೇಲಿ ಸೇನೆ ತಿಳಿಸಿದೆ.(ಏಜೆನ್ಸೀಸ್​)