ನ್ಯೂಸ್

ರೈತರಿಗೆ ಪರಿಹಾರ ಕೊಡದಿದ್ದರೆ ಹೋರಾಟ ಅನಿವಾರ್ಯ; ಚಂದ್ರಶೇಖರ

ರಾಣೆಬೆನ್ನೂರ: ರಾಣೆಬೆನ್ನೂರಿನಲ್ಲಿ ಕಳಪೆ ಬೀಜ ಹಾಗೂ ನಕಲಿ ಗೊಬ್ಬರ ನೀಡಿ ರೈತರಿಗೆ ಅನ್ಯಾಯ ಮಾಡಿರುವ ಅಂಗಡಿಕಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಗದಗ ಸೇರಿದಂತೆ 6 ಜಿಲ್ಲೆಗಳ ರೈತರಿಗೆ ರಾಣೆಬೆನ್ನೂರಿನ ಸೀಡ್ಸ್​ ಕೇಂದ್ರದವರು ಕಳಪೆ ಬೀಜ ಕೊಟ್ಟು ಮೋಸ ಮಾಡಿದ್ದಾರೆ. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ರೈತರಿಗೆ ಪರಿಹಾರ ಕೊಡಿಸುತ್ತೇವೆ ಎನ್ನುವ ಜಿಲ್ಲಾಡಳಿತ ಭರವಸೆ ಈಡೇರಿಸುವುದು ಅಷ್ಟು ಸುಲಭವಲ್ಲ.

ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸರ್ಕಾರದೊಂದಿಗೆ ಚಚಿರ್ಸಿ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಭಕ್ತರಹಳ್ಳಿ ಭೈರೇಗೌಡ, ರವೀಂದ್ರಗೌಡ ಪಾಟೀಲ, ಈರಣ್ಣ ಹಲಗೇರಿ, ಹರಿಹರಗೌಡ ಪಾಟೀಲ, ಯಲ್ಲಪ್ಪ ಓಲೇಕಾರ, ಡಾ. ಆರ್​.ಎಚ್​. ವಡ್ಡರ, ಸುರೇಶ ಮಲ್ಲಾಪುರ, ಮಲ್ಲಪ್ಪ ಲಿಂಗದಹಳ್ಳಿ, ಆನಂದ ರಂಗಣ್ಣನವರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.