ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರವನ್ನು ಹಿಡಿದರೆ, ಭಾರತದೊಂದಿಗಿನ ಸಂಬಂಧವನ್ನು ಮತ್ತುಷ್ಟು ಸುಧಾರಿಸಿ, ಇನ್ನೊಂದು ಸ್ತರಕ್ಕೆ ಕೊಂಡೊಯ್ಯುವುದಾಗಿ ಡಿಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಹೇಳಿದ್ದಾರೆ.
ಭಾರತ ಅಮೆರಿಕದ ಅತ್ಯಂತ ಸಹಜವಾದ ಪಾಲುದಾರ ರಾಷ್ಟ್ರವಾಗಿದೆ. ಇಂಥ ರಾಷ್ಟ್ರದೊಂದಿಗಿನ ಸಂಬಂಧವನ್ನು ಉತ್ತಮ ಪಡಿಸುವ ಜತೆಗೆ ಅದನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯುವುದು ತಮ್ಮ ಆಡಳಿತದ ಆದ್ಯತೆ ಆಗಿರುತ್ತದೆ ಎಂದು ಹೇಳಿದರು.
ನಮ್ಮ ಸುರಕ್ಷತೆಯ ದೃಷ್ಟಿಯಿಂದ ಮಾತ್ರವಲ್ಲ, ಅವರ ಸುರಕ್ಷತೆಯ ದೃಷ್ಟಿಯಿಂದಲೂ ಈ ಪ್ರದೇಶದಲ್ಲಿ ಭಾರತ ಅಮೆರಿಕದ ಪಾಲುದಾರ ರಾಷ್ಟ್ರವಾಗಿ ಇರಬೇಕಾಗುತ್ತದೆ ಎಂದು ತಿಳಿಸಿದರು.
2020ರ ನವೆಂಬರ್ನಲ್ಲಿ ನಿಗದಿಯಾಗಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿ ದೇಣಿಗೆ ಸಂಗ್ರಹಸಿಲು ಬೆಕಾನ್ ಕ್ಯಾಪಿಟಲ್ ಪಾರ್ಟನರ್ಸ್ನ ಚೇರ್ಮನ್ ಮತ್ತು ಸಿಇಒ ಅಲಾನ್ ಲೆವಂತಾಲ್ ಆಯೋಜಿಸಿದ್ದ ದೇಣಿಗೆ ಸಂಗ್ರಹ ಸಭೆಯಲ್ಲಿ ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ, ಸಂಬಂಧ ಸುಧಾರಣೆ ಕುರಿತು ಪ್ರಸ್ತಾಪಿಸಿದರು.
ಬರಾಕ್ ಒಬಾಮಾ ಅವರ ಜತೆಯಲ್ಲಿ ಎಂಟು ವರ್ಷ ಉಪಾಧ್ಯಕ್ಷ ಸ್ಥಾನವನ್ನು ನಿಭಾಯಿಸಿದ ಅನುಭವವನ್ನು ಹಂಚಿಕೊಂಡ ಜೋ ಬಿಡೆನ್, ಅಮೆರಿಕ-ಭಾರತ ನಡುವಿನ ನಾಗರಿಕ ಅಣು ಒಪ್ಪಂದ ಏರ್ಪಡುವಂತೆ ಮಾಡಿ, ಸಂಸತ್ನಲ್ಲಿ ಅದಕ್ಕೆ ಅನುಮೋದನೆ ಪಡೆದುಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾಗಿ ತಿಳಿಸಿದರು. ಡೆಲಾವೇರ್ನ ಸಂಸತ್ ಸದಸ್ಯರಾಗಿರುವ ಇವರು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಸುಧಾರಣೆ ವಿಷಯದಲ್ಲಿ ಭಾರಿ ಒಲವು ಹೊಂದಿದ್ದಾರೆ.