ಮಾಜಿ ಸಚಿವ ಕಿಮ್ಮನೆ ರತ್ನಾಕರ್  
ನ್ಯೂಸ್

ದೇಶದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡದಿದ್ದರೆ ಕಷ್ಟ: ಕಿಮ್ಮನೆ ರತ್ನಾಕರ್

ಶಿವಮೊಗ್ಗ: ದೇಶದಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಶರಾವತಿನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಯುವ ಒಕ್ಕಲಿಗರ ವೇದಿಕೆ ಜಿಲ್ಲಾ ಘಟಕದಿಂದ ಬುಧವಾರ ಒಕ್ಕಲಿಗರ ಯುವ ಸಮಾವೇಶದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಅಂಗವಿಕಲರಿಗೆ ವೀಲ್‌ಚೇರ್, ವಾಕರ್, ವಾಕ್‌ಸ್ಟಿಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶಿಕ್ಷಣದಿಂದ ವಂಚಿತರಾಗುವವರ ಸಂಖ್ಯೆ ಹೆಚ್ಚಾಗಿದೆ. ಶಿಕ್ಷಣಕ್ಕೆ ಮಹತ್ವ ಕೊಟ್ಟಾಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆದು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕಿದೆ. ರಾಜ್ಯದಲ್ಲಿ 45 ಸಾವಿರ ಸರ್ಕಾರಿ ಶಾಲೆಗಳಿದ್ದು ವಾಸ್ತವವಾಗಿ 25ರಿಂದ 30 ಸಾವಿರ ಶಾಲೆಗಳು ಮಾತ್ರ ಅಗತ್ಯವಾಗಿವೆ. ಮೊಟ್ಟೆ, ಹಾಲು, ಬಿಸಿಯೂಟ ಸೇರಿ ಹಲವು ಸೌಲಭ್ಯಗಳನ್ನು ಕಲಿಸಿದರೂ ಮಕ್ಕಳು ಶಾಲೆಗೆ ಬರುತ್ತಿಲ್ಲ. ನಾನು ಶಿಕ್ಷಣ ಸಚಿವನಾಗಿದ್ದಾಗ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಪ್ರತಿ ಗ್ರಾಪಂಗೆ ಒಂದು ಅಥವಾ ಎರಡು ಶಾಲೆಗಳು ಮಾತ್ರ ಇರುವಂತೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ ಎಂದರು.
ವಿದ್ಯಾರ್ಥಿಗಳನ್ನು ಟಿವಿ ಮತ್ತು ಮೊಬೈಲ್‌ಗಳಿಂದ ದೂರ ಇಡುವ ಕೆಲಸ ಆಗಬೇಕಿದೆ. ಜೀವನದಲ್ಲಿ ಹಣ ಮಾಡುವುದೇ ಗುರಿ ಆಗಬಾರದು. ಹಣ ಬದುಕಿನ ಒಂದು ಸಾಧನವಷ್ಟೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಹಣದ ಹಿಂದೆ ಜೋತು ಬೀಳಬಾರದು ಎಂದು ಸಲಹೆ ನೀಡಿದರು.