ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ನಗರದ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಹನುಮನಹಳ್ಳಿ ಕ್ರಾಸ್ ಸಮೀಪದ ಬೆಟ್ಟ ಗುಡ್ಡಗಳ ಪ್ರಕೃತಿ ಮಧ್ಯೆ ಹನುಮೇನಹಳ್ಳಿ ಸರ್ವೇ ನಂಬರ್ 269ರಲ್ಲಿ 202 ಎಕರೆ ಸರ್ಕಾರಿ ಜಮೀನಿನಲ್ಲಿರುವ ದ್ಯಾವಪ್ಪನ ಕೆರೆಯನ್ನು ಪ್ರಗತಿಪರ ರೈತ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಪರಿಶೀಲಿಸಿದರು.
ಕೆರೆ ಪುನಶ್ಚೇತನಗೊಂಡಲ್ಲಿ ಸುತ್ತಲ ಪ್ರದೇಶದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಸುತ್ತಲ ಹಳ್ಳಿಗಳು ಹಾಗೂ ನಗರಕ್ಕೆ ಕುಡಿಯುವ ನೀರನ್ನು ಪೂರೈಸಬಹುದಾಗಿದೆ. ದ್ಯಾವಪ್ಪನ ಕೆರೆ ಉನ್ನತ ಮಟ್ಟಕೇರಿಸಲು ಅಖಿಲ ಕರ್ನಾಟಕ ರೈತ ಸಂಘ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ಒತ್ತಾಯಿಸಿದರು.
ಕೆರೆಯಿಂದ ಎತ್ತಿನ ಹೊಳೆ ಪೈಪ್ ಲೈನ್ 9 ಕಿಮೀ ಅಂತರವಿದ್ದು ಎತ್ತಿನ ಹೊಳೆ ನೀರನ್ನು ಶೇಖರಿಸಿ ಗೌರಿಬಿದನೂರಿಗೆ ನೀರನ್ನು ಒದಗಿಸಬಹುದಾಗಿದೆ. 15 ರಿಂದ 20 ಕೋಟಿ ವೆಚ್ಚದಲ್ಲಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ವ್ಯವಸಾಯಕ್ಕೆ ಬೇಕಾದಷ್ಟು ನೀರನ್ನು ಒದಗಿಸಬಹುದು ಎಂದು ನೀರಾವರಿ ತಜ್ಞರು ವರದಿ ನೀಡಿದ್ದಾರೆ. ಕೆರೆ ಉನ್ನತಿಕರಣವಾದರೆ ತಾಲೂಕಿಗೆ ಜೀವನಾಡಿಯಾಗುವುದು ಎನ್ನುತ್ತಾರೆ ಗ್ರಾಮಸ್ಥರು. ಶಾಸಕರು, ಜನಪ್ರತಿನಿಧಿಗಳು ಶೀಘ್ರದಲ್ಲಿ ಸರ್ಕಾರದ ಗಮನಕ್ಕೆ ತಂದು ಕಾಮಗಾರಿ ಪೂರ್ಣಗೊಳಿಸಿದರೆ ಶಾಶ್ವತ ಕುಡಿಯುವ ನೀರು ಒದಗಿಸಿದಂತಾಗುತ್ತದೆ.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಿ.ಎಲ್.ಅಶ್ವಥ್ ನಾರಾಯಣ, ಪ್ರಭಾಕರ್, ನಂಜೇಗೌಡ, ಗೋಪಿ, ಎ.ಕೆ.ಆರ್.ಎಸ್ ಜಿಲ್ಲಾ ಸಂಚಾಲಕ ರವಿಚಂದ್ರಾ ರೆಡ್ಡಿ, ಲಕ್ಷಿ$್ಮನಾರಾಯಣ ರೆಡ್ಡಿ, ಸತ್ಯನಾರಾಯಣ, ಧನುರಾಜು, ಜಯಚಂದ್ರ ರೆಡ್ಡಿ ಇದ್ದರು.