ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಯ ನೈತಿಕ ಹೊಣೆ ಹೊತ್ತು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಇಲ್ಲವೇ ಸಿಎಂ, ಡಿಸಿಎಂಗೆ ನಾಚಿಕೆ, ಮಾನ-ಮರ್ಯಾದೆಯಿದ್ದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಈ ಹಿಂದೆ ನಾನು ಸಚಿವನಾಗಿದ್ದಾಗ ಅದ್ಯಾರೋ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದ. ಡೆತ್ ನೋಟ್‌ನಲ್ಲಿ ಆತನ ಸಹಿಯೂ ಇರಲಿಲ್ಲ. ಆದರೂ ಕಾಂಗ್ರೆಸ್‌ನವರು ನನ್ನ ರಾಜೀನಾಮೆಗೆ ಒತ್ತಾಯಿಸಿ ದೊಂಬಿ ಎಬ್ಬಿಸಿದ್ದರು.
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ನನ್ನಪಾತ್ರ ಎಳ್ಳಷ್ಟು ಇದ್ದಿಲ್ಲ. ನಂತರ ನಡೆದ ತನಿಖೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿತು. ನನ್ನ ರಾಜೀನಾಮೆ ಕೇಳಿ ಪಡೆದಿದ್ದಕ್ಕೆ ಕಾಂಗ್ರೆಸ್‌ನವರು ಕ್ಷಮೆಯಾಚಿಸಬೇಕು. ಅಷ್ಟೇ ಅಲ್ಲ, ಪ್ರಿಯಾಂಕ್ ಖರ್ಗೆ ಅಹಂಕಾರದ ಹೇಳಿಕೆ ಕೊಡುವುದು ಬಿಟ್ಟು, ರಾಜೀನಾಮೆ ನೀಡಿ ದೋಷಾರೋಪ ಮುಕ್ತರಾಗಿ, ಮತ್ತೆ ಮಂತ್ರಿಯಾಗಲಿ ಎಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ನೀಡಲು ಮುಂದಾದಾಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಬೇಡ ತಡೆಯಿರಿ ಎಂದಿದ್ದರು. ಪ್ರಿಯಾಂಕ್ ಖರ್ಗೆ ವಿಚಾರದಲ್ಲಿ ರಾಜಕೀಯ ಪಕ್ಷವಾಗಿ ಬಿಜೆಪಿ ಹೋರಾಟ ಮಾಡಿದ್ದು, ಮತ್ತಷ್ಟು ಪ್ರಬಲವಾಗಿ ಧ್ವನಿ ಎತ್ತಬೇಕಾಗಿದೆ ಎಂದರು.
ಬಿಜೆಪಿ ಶುದ್ಧೀಕರಣವಾಗಬೇಕು ಎಂದು ಬಯಸಿದ್ದು, ಪಕ್ಷದೊಳಗೆ ಅದೇ ಚರ್ಚೆ ನಡೆದಿದೆ. ಬಿಜೆಪಿ ಹಿಂದುತ್ವದಿಂದ ದೂರ ಸರಿದು ಹೊಂದಾಣಿಕೆ ರಾಜಕೀಯದತ್ತ ವಾಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಅಡ್ಜಸ್ಟಮೆಂಟ್ ರಾಜಕಾರಣ ಎಲ್ಲರಿಗೂ ಗೊತ್ತಿದೆ ಎಂದು ಕುಟುಕಿದರು.
ಹೊಂದಾಣಿಕೆ ರಾಜಕೀಯದಿಂದ ಬಿಜೆಪಿ ಶುದ್ಧವಾಗಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿದೆ. ಈ ಹಿಂದೆ ನಾನು ಯಾವ ವಿಚಾರ ಹೇಳಿದ್ದನೋ ಅದೇ ವಿಚಾರ ಪಕ್ಷದಲ್ಲಿ ಚರ್ಚೆಯಾಗುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ಪುನರುಚ್ಚರಿಸಿದರು.
ಹಿಂದುಳಿದವರು, ದಲಿತರು ಸೇರಿ ಅನ್ಯಾಯ ಆದವರ ಪರವಾಗಿ ನಿಲ್ಲಲು, ಧ್ವನಿ ಎತ್ತುವ ಉದ್ದೇಶದಿಂದ ಕ್ರಾಂತಿವೀರ ಬ್ರಿಗೇಡ್ ಸ್ಥಾಪಿಸಲಾಗುತ್ತಿದೆ. ಬಸವನಬಾಗೇವಾಡಿಯಲ್ಲಿ ೆ.4ರಂದು 1008 ಮಠಾಧೀಶರ ಪಾದಪೂಜೆಯೊಂದಿಗೆ ಚಾಲನೆ ಪಡೆಯಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದರು.
ಸಕಲ ಹಿಂದು ಸಮುದಾಯದ ರಕ್ಷಣೆಗೆ ಬ್ರಿಗೇಡ್ ಕೆಲಸ ಮಾಡಲಿದೆ. ಬ್ರಿಗೇಡ್‌ಗೆ ಬಸವರಾಜ ಬಾಳೇಕಾಯಿ ಅಧ್ಯಕ್ಷ, ಕೆ.ಇ.ಕಾಂತೇಶ್ ಕಾರ್ಯಾಧ್ಯಕ್ಷರಾಗಿದ್ದಾರೆ. ನಾನು ಮತ್ತು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.
ಈ ಹಿಂದೆ ಅಮಿತ್ ಷಾ ಮಾತು ಕೇಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದೆ. ಈಗ ಸಾಧು-ಸಂತರ ಜತೆಗೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು ಮಾಡಿದ್ದೇವೆ. ಈ ಬಾರಿ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಪ್ರಧಾನಿ ನರೇಂದ್ರ ಮೋದಿಯವರು ನಿಲ್ಲಿಸಲು ಹೇಳುವುದಿಲ್ಲ.
ಹಿಂದು ಸಮುದಾಯದ ಹಿತರಕ್ಷಣೆಯೇ ಬ್ರಿಗೇಡ್‌ನ ಮುಖ್ಯ ಉದ್ದೇಶವಾಗಿದೆ. ಬ್ರಿಗೇಡ್‌ಗೆ ಯಾರೇ ಬೆಂಬಲಿಸಿದರೂ ಸ್ವಾಗತಿಸುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳು ತಾತ್ಸಾರಕ್ಕೆ ಒಳಗಾಗಿದ್ದಾರೆ. ಗೋಶಾಲೆ ತೆರೆಯುವ ಆದೇಶ ಹಿಂಪಡೆಯಲಾಗಿದೆ. ವಕ್ಫ್ ಮಂಡಳಿಯಿಂದ ಹಿಂದುಗಳು ಆಸ್ತಿ ಕಬಳಿಸುತ್ತಿದ್ದು, ನೀಡಿದ ನೋಟಿಸ್ ವಾಪಸ್ ಪಡೆದಿರುವ ಬಗ್ಗೆ ಖಚಿತ ಮಾಹಿತಿಯಿಲ್ಲವೆಂದರು.
ಮುಂದಿನ ರಾಜಕೀಯ ನಡೆ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ. ಬಿಜೆಪಿಗೆ ಮರಳುವ ಬಗ್ಗೆ ಯೋಚನೆ ಮಾಡುತ್ತಿದ್ದು, ಬಿಜೆಪಿ ವರಿಷ್ಠರು ಇದೇ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜತೆಗೆ ವೈಯಕ್ತಿಕ ದ್ವೇಷವಿಲ್ಲ ಎಂದರು.