ಶಿವಮೊಗ್ಗ: ಮಕ್ಕಳಿಗೆ ಸರಿಯಾದ ಸಂಸ್ಕಾರ ಇಲ್ಲದಿದ್ದರೆ ಪಡೆದ ಶಿಕ್ಷಣಕ್ಕೆ ಬೆಲೆ ಇರುವುದಿಲ್ಲ. ಹಾಗಾಗಿ ಇಂದು ಪಠ್ಯದ ಜತೆ ಓದಿ ಹೆಚ್ಚಿನ ಅಂಕ ಪಡೆಯುವ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಮುಖ್ಯವಾಗಿದೆ ಎಂದು ತರಳಬಾಳು ಜಗದ್ಗುರು ಸಾಣೇಹಳ್ಳಿ ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಅನುಪಿನಕಟ್ಟೆಯ ಶ್ರೀರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಬುಧವಾರ ಮಕ್ಕಳಿಂದ ಪಾಲಕರ ಪಾದಪೂಜೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪಠ್ಯದ ಜತೆ ಮಕ್ಕಳಲ್ಲಿ ನೈತಿಕತೆ, ಧಾರ್ಮಿಕತೆ, ಆಧ್ಯಾತ್ಮಿಕತೆ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುವ ಕೆಲಸ ಆಗಬೇಕಿದೆ ಎಂದರು.
ಇಂದಿನ ಜಗತ್ತಿನಲ್ಲಿ ಭ್ರಷ್ಟಾಚಾರ ದುರಾಚಾರಗಳು ಹೆಚ್ಚುತ್ತಿದ್ದು, ಅದನ್ನು ವಿದ್ಯೆ ಇಲ್ಲದ ಯಾವುದೋ ಕೂಲಿಕಾರ, ಕೃಷಿಕ ಮಾಡುವುದಿಲ್ಲ. ಉನ್ನತ ಶಿಕ್ಷಣ ಪಡೆದವರೇ ಇಂತಹ ದುರಾಚಾರಗಳಿಗೆ ಕಾರಣರಾಗುತ್ತಿದ್ದಾರೆ. ಅದಕ್ಕೆ ಕಾರಣ ಅವರಲ್ಲಿ ಸಂಸ್ಕಾರ ಇಲ್ಲದಿರುವುದು. ಅವರಿಗೆ ಸಕಾಲದಲ್ಲಿ ಸಂಸ್ಕಾರ ದೊರೆಯದಿರುವುದು ಕಾರಣ ಎಂದರೆ ತಪ್ಪಾಗುವುದಿಲ್ಲ. ಈ ನಿಟ್ಟಿನಲ್ಲಿ ರಾಮಕೃಷ್ಣ ಶಾಲೆಯ ಕಾರ್ಯಕ್ರಮ ನಿಜಕ್ಕೂ ಅರ್ಥಗರ್ಭಿತವಾದದ್ದು ಎಂದರು.
ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜಗಕ್ಕೆ ಜ್ಯೋತಿಯಾಗು ಕಂದ ಎಂದ ತಾಯಿಯ ಮಾತನ್ನು ಮಕ್ಕಳು ಅಳವಡಿಸಿಕೊಳ್ಳಬೇಕು. ಅದಕ್ಕೆ ಪಾಲಕರು ಸಹ ಪೂರಕವಾದ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳು ಮೊದಲು ತಂದೆ ತಾಯಿಯರನ್ನು ಅನುಕರಿಸುತ್ತಾರೆ. ಇಲ್ಲಿಯವರೆಗೆ ಮಾಡಿದ ದುರಾಭ್ಯಾಸಗಳನ್ನು ಇಂದಿನಿಂದಲಾದರೂ ಬಿಟ್ಟು ಬಿಡುವ ಬಿಡುವ ಕಂಕಣ ತೊಟ್ಟುಕೊಳ್ಳಬೇಕು ಎಂದರು.
ಇಂದಿನ ದಿನಮಾನಗಳಲ್ಲಿ ಕೆಲವರ ದೇಹ ಕೊಳಚೆಗುಂಡಿಯಾಗಿದೆ. ಕುಡಿಯಬಾರದನ್ನು ಕುಡಿಯುವುದು, ತಿನ್ನಬಾರದನ್ನು ತಿನ್ನೋದು ಹೆಚ್ಚಾಗಿರುವುದು ಇದಕ್ಕೆ ಕಾರಣ. ಹಾಗಾಗಿಯೇ ಭಗವಂತನ ಒಲುಮೆಗೆ ಮೀಸಲಾಗಿರುವ ಶರೀರವನ್ನು ಭಗವಂತನಿಗೆ ಅರ್ಪಿಸಲು ಅದು ಪವಿತ್ರವಾಗಿರಬೇಕು ಎಂದು ತಿಳಿಸಿದರು.
ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಆರ್.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಸಿ.ಎಂ.ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ, ಕೋ ಆರ್ಡಿನೇಟರ್‌ಗಳಾದ ಕೆ.ಎಚ್.ಅರುಣ್, ಕೆ.ಡಿ.ಶರತ್ ಉಪಸ್ಥಿತರಿದ್ದರು.