ಹುಣಸೂರು: ಹಾಡಿಯ ಗಿರಿಜನರು ಬೇರೆಡೆಗೆ ವಲಸೆ ಹೋಗದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನೆ ಬಾಗಿಲಲ್ಲೇ ಉದ್ಯೋಗ ಪಡೆದುಕೊಳ್ಳುವಂತೆ ತಾಲೂಕು ಐಇಸಿ ಸಂಯೋಜಕಿ ಪುಷ್ಪಾವತಿ ಸಲಹೆ ನೀಡಿದರು.
ತಾಲೂಕಿನ ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಳ ಹಾಡಿಯ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನ ಹಾಗೂ ರೋಜ್ಗಾರ್ ದಿವಸ್ ಆಚರಣೆ ಸಂದರ್ಭದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಫಲಾನುಭವಿಗಳು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ವೈಯಕ್ತಿಕ ಕಾಮಗಾರಿಗಳಲ್ಲಿ ಅನುಷ್ಠಾನಗೊಳ್ಳುವ ಒಳಚರಂಡಿ ನಿರ್ಮಾಣ, ಕೈ ತೋಟ, ಜಮೀನುಗಳಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವ ಮೂಲಕ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಷಡಕ್ಷರಿ ಮಾತನಾಡಿ, ಪಿಎಂ ಜನ್‌ಮನ್ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಾಡಿ ಜನರಿಗೆ ಸುಮಾರು 145 ಮನೆಗಳು ಅನುಮೋದನೆಗೊಂಡಿವೆ. ಆದರೆ ಇದುವರೆವಿಗೂ ಮನೆ ನಿರ್ಮಾಣ ಮಾಡಿಕೊಳ್ಳಲು ಮುಂದಾಗಿಲ್ಲ. ಹಾಗಾಗಿ ಪ್ರಾರಂಭವಾಗದೆ ಇರುವ ಮನೆಗಳನ್ನು ಪ್ರಾರಂಭಿಸುವಂತೆ ಹಾಗೂ ಪ್ರಾರಂಭಗೊಂಡಿರುವ ಮನೆಗಳನ್ನು ಬೇಗ ಮುಕ್ತಾಯಗೊಳಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಹೆಬ್ಬಾಳ ಗ್ರಾಮದ ಸದಸ್ಯರಾದ ಟಿ.ಗೌರಮ್ಮ, ಟಿ.ಎಸ್.ರಾಧಾ, ಹಾಡಿ ಮುಖಂಡರಾದ ಚಂದ್ರು, ನಾಗೇಶ್, ಅಯ್ಯನಕೆರೆ ಹಾಡಿಯ ಶಿವಣ್ಣ ಮತ್ತು ಕಾಂತರಾಜು, ಕರ ವಸೂಲಿಗಾರ ಉಮೇಶ್ ಸೇರಿದಂತೆ ಹಾಡಿ ಗ್ರಾಮಸ್ಥರು ಪಾಲ್ಗೊಂಡಿದ್ದರು.