ಬೆಂಗಳೂರು: ಎಲೆಮರೆಯ ಕಾಯಿಯಂತಹ ಸಾಧಕರನ್ನು ಗುರುತಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು,
ಸಾಧಕರ ಸಾಧನೆಯನ್ನು ಗೌರವಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಕನ್ನಡದ ಮಠಗಳು ಸಾಕಷ್ಟು ಕೆಲಸ ಮಾಡುತ್ತ ಬಂದಿವೆ. ಕನ್ನಡದ ಗಡಿ ಗಟ್ಟಿ ಇದ್ದರೆ ನಾಡು ಗಟ್ಟಿಯಾಗಿರುತ್ತದೆ ಎನ್ನುವ ಮಾತಿನಂತೆ ನಾಡಿಗೆ ಕನ್ನಡದ ಭದ್ರ ಬೇಲಿಯನ್ನು ಹಾಕುವ ಮೂಲಕ ಕನ್ನಡ ಉಳಿಸುವ ಕೆಲಸವನ್ನು ಮಠಮಾನ್ಯಗಳು ಮಾಡಿವೆ. ಕನ್ನಡ ಸೇನಾನಿ ಮ. ರಾಮಮೂರ್ತಿಯವರ ನೆನಪಿನಲ್ಲಿ ‘ಕನ್ನಡ ಕಾಯಕ’ ಪ್ರಶಸ್ತಿಯನ್ನು ನೀಡುತ್ತಿರುವ ವೇಳೆ ಅವರ ಪತ್ನಿಯ ಕಮಲಮ್ಮರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸುವ ಮೂಲಕ ಗೌರವ ಸಲ್ಲಿಸಲಾಗಿದೆ ಎಂದರು.
ಬೇಲಿಮಠದ ಪೀಠಾಧ್ಯಕ್ಷ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಸರಕಾರ ಯಾರ್ಯಾರಿಗೋ ಏನೇನೋ ಸವಲತ್ತುಗಳನ್ನು ನೀಡುತ್ತದೆ. ಆದರೆ, ನಿಜವಾದ ಸಾಧಕರನ್ನು ಗುರುತಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ನಮ್ಮ ನಾಡಿನ ಅನರ್ಘ್ಯರತ್ನಗಳು ವಿವಿಧ ಕ್ಷೇತ್ರದಲ್ಲಿ ಅದ್ಭುತಗಳನ್ನು ಸೃಷ್ಟಿಮಾಡುವ ಮೂಲಕ ಕರುನಾಡಿನ ಹೆಸರನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅಂತವರನ್ನು ಕನ್ನಡ ಸಾಹಿತ್ಯ ಪರಿಷತ್ತು ಹುಡುಕಿ ಗೌರವಿಸುತ್ತಿರುವುದು ಸ್ವಾಗತಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.
ಲೇಖಕಿ ಡಾ. ವನಮಾಲಾ ವಿಶ್ವನಾಥ, ಕನ್ನಡ ಪರಿಚಾರಕ ವ.ಚ.ಚನ್ನೇಗೌಡ, ಕಸಾಪ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ, ಡಾ. ಪದ್ಮಿನಿ ನಾಗರಾಜ, ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ.ಪಟೇಲ್ ಪಾಂಡು ಮತ್ತಿತರರಿದ್ದರು.
ಉತ್ತರ ಭಾರತದವರು ನಮ್ಮಲ್ಲಿ ಬಂದು ತಮ್ಮದ್ದೇ ನೆಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ ಕರ್ನಾಟಕವೇ ಒಂದು ರಾಷ್ಟ್ರ, ಭಾರತ ಅದರೊಂದಿಗೆ ಸೇರಿಕೊಂಡಿದೆ. ನಾವು ಭಾಷಾ ಪ್ರೇಮ ಮತ್ತು ನಾಡಿನ ಅಭಿಮಾನವನ್ನು ಯಾವತ್ತೂ ಕಡಿಮೆ ಮಾಡಿಕೊಳ್ಳಬಾರುದು. ಕನ್ನಡ ಕನ್ನಡಿಗ ಕರ್ನಾಟಕ ನಮ್ಮ ಧ್ಯೇಯ ವಾಕ್ಯವಾಗಲಿ.
- ಡಾ. ಪಿ.ವಿ.ನಾರಾಯಣ, ಬಿಎಂಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ
ಪ್ರಶಸ್ತಿ ಪುರಸ್ಕೃತರು:
* ಮ. ರಾಮಮೂರ್ತಿ ಪ್ರಶಸ್ತಿ: ಬೆಂಗಳೂರಿನ ಜಿ.ಕೆ. ಸತ್ಯ, ಬೆಂಗಳೂರು.
* ಕನ್ನಡ ಕಾಯಕ ಪ್ರಶಸ್ತಿ: ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣಿ), ಶಿವಾನಂದ ಕಳವೆ (ಉತ್ತರ ಕನ್ನಡ), ಹೆಲನ್ (ಮೈಸೂರು).
* ಡಾ. ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ: ಡಾ. ಎ.ಪುಷ್ಪ ಅಯ್ಯಂಗಾರ್ (ಮೈಸೂರು) ಮತ್ತು ಜಯಲಕ್ಷ್ಮೀ ಪಾಟೀಲ್ (ವಿಜಯಪುರ).
* ಮನೋಹರಿ ಪಾರ್ಥಸಾರಥಿ ಮನುಶ್ರೀ ಪ್ರಶಸ್ತಿ: ಗುಣಸಾಗರಿ ನಾಗರಾಜ (ಮಂಡ್ಯ), ಡಿ.ಎನ್. ಗೀತಾ (ಚಿಕ್ಕಮಗಳೂರು).