ನ್ಯೂಸ್

ಬ್ಯಾರಿಕೇಡ್​​ಗೆ ಗುದ್ದಿ ಪಲ್ಟಿ ಹೊಡೆದ ಐಸ್ ಕ್ರೀಮ್ ಕಂಟೇನರ್; ಡ್ರೈವರ್​​, ಕ್ಲೀನರ್ ಸ್ಥಳದಲ್ಲೇ ಸಾವು

ಆನೇಕಲ್: ಐಸ್ ಕ್ರೀಮ್ ಕಂಟೇನರ್ ಪಲ್ಟಿ ಹೊಡೆದ ಪರಿಣಾಮ ಕಂಟೇನರ್​​ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ವೃತ್ತದಲ್ಲಿ ನಡೆದಿದೆ. ಕಂಟೇನರ್ ವೇಗವಾಗಿ ಬೊಮ್ಮಸಂದ್ರದಿಂದ ಹೊಸಕೋಟೆಗೆ ಹೋಗುತ್ತಿತ್ತು. ಈ ಸಮಯದಲ್ಲಿ ಕಂಟೇನರ್ ಹೆದ್ದಾರಿಯ ಬ್ಯಾರಿಕೇಡ್​​ಗೆ ಗುದ್ದಿ, ಬಳಿಕ ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಬ್ಯಾರಿಕೇಡ್​​ ಕಂಬಿಗಳು ಚುಚ್ಚಿ ಡ್ರೈವರ್ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಾಲಕ ಹಾಗೂ ಕ್ಲೀನರ್ ತಮಿಳುನಾಡು ಮೂಲದವರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಅತ್ತಿಬೆಲೆ ಪೊಲೀಸರಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮೃತ ದೇಹಗಳನ್ನು ಆಕ್ಸ್​​ಫರ್ಡ್​ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದೆ.

ಐಸ್ ಕ್ರೀಮ್ ತುಂಬಿದ ಕಂಟೇನರ್​​ ಮಿಲ್ಕಿ ಮಿಸ್ಟ್ ಕಂಪನಿಗೆ ಸೇರಿದೆ. ಐಸ್ ಕ್ರೀಮ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಐಸ್ ಕ್ರೀಮ್ ನಷ್ಟವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿದ್ದಾರೆ.

ಸಾವನ್ನಪ್ಪಿದ ಚಾಲಕ ಕಾರ್ತಿಕ್‌, ಕ್ಲೀನರ್ ಉದಯ್ ಎಂದು ಗುರುತಿಸಲಾಗಿದೆ. ಚಾಲಕನ ಅತಿವೇಗದಿಂದ ಅಪಘಾತ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.