ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕುಟುಂಬ ಸಮೇತ ಎರಡು ದಿನಗಳ ಭಾರತ ಪ್ರವಾಸಕ್ಕೆಂದು ಇಂದು ಆಗಮಿಸಿದ್ದಾರೆ. ಇಂದು ಬೆಳಗ್ಗೆ ಅಹಮದಾಬಾದ್ನ ವಿಶ್ವದ ಬಹುದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮೊಟೆರಾ ಸ್ಟೇಡಿಯಂನಲ್ಲಿ ನಡೆದ "ನಮಸ್ತೆ ಟ್ರಂಪ್" ಕಾರ್ಯಕ್ರಮವನ್ನು ಉದ್ದೇಶಿಸಿ ಟ್ರಂಪ್ ಮಾತನಾಡಿದರು. ಭಾಷಣದ ವೇಳೆ ಟ್ರಂಪ್ ಆಡಿದ ಮಾತೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗಿದೆ.
ಇಂದು ಬೆಳಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುಟುಂಬ ಸಮೇತ ಬಂದಿಳಿದ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಟ್ರಂಪ್ ಜತೆಯಲ್ಲಿ ಅಮೆರಿಕ ನಿಯೋಗವು ಆಗಮಿಸಿತ್ತು. ಬಳಿಕ ಅದ್ಧೂರಿ ರೋಡ್ ಶೋ ಮೂಲಕ ಗಾಂಧಿಯ ಸಬರಮತಿ ಆಶ್ರಮಕ್ಕೆ ತೆರಳಿ, ಅಲ್ಲಿಂದ ಮೊಟೆರಾ ಕ್ರೀಡಾಂಗಣಕ್ಕೆ ಆಗಮಿಸಿದರು.
ಭಾಷಣ ಆರಂಭಿಸಿದ ಟ್ರಂಪ್ ಮೊದಲಿಗೆ ಭಾರತೀಯರಿಗೆ ಧನ್ಯವಾದ ಹೇಳಿದರು. ತಮ್ಮ ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿ ಹಾಗೂ ಭಾರತವನ್ನು ಕೊಂಡಾಡಿದರು. ಬಾಲಿವುಡ್ ಸಿನಿಮಾಗಳನ್ನು ಮೆಲುಕು ಹಾಕಿದರು. ಇದೇ ವೇಳೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಟೀಮ್ ಇಂಡಿಯಾ ಯಶಸ್ವಿ ನಾಯಕ ವಿರಾಟ್ ಕೊಹ್ಲಿಯನ್ನು ವಿಶ್ವಶ್ರೇಷ್ಠ ಆಟಗಾರರು ಎಂದು ಬಣ್ಣಿಸಿದರು.
ಆದರೂ, ಸಚಿನ್ ಹೆಸರು ಉಲ್ಲೇಖಿಸಿದ ಟ್ರಂಪ್ ಕುರಿತು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅದಕ್ಕೆ ಕಾರಣ ಸಚಿನ್ ಹೆಸರು ಉಚ್ಛರಿಸಿದ ರೀತಿ. ಸಚಿನ್ ಎಂದು ಕರೆಯುವ ಬದಲು ಸೂಚಿನ್ ಎಂದು ಉಚ್ಛರಿಸಿದರು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಗೆಬುಗ್ಗೆಯನ್ನು ಹರಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೂಡ ತನ್ನ ಟ್ವಿಟರ್ನಲ್ಲಿ ವಿನೂತನವಾಗಿ ಟ್ವೀಟ್ ಮಾಡಿದೆ.
ಸ್ಯಾಚ್, ಸಚ್, ಸುಚ್ ಮತ್ತು ಸೂಚ್ ಎಂದು ಬರೆದು ಯಾರಿಗಾದರೂ ತಿಳಿದಿದೆಯೇ ಎಂದು ಐಸಿಸಿ ಪ್ರಶ್ನಿಸಿದೆ. ಅಲ್ಲದೆ, ವಿಡಿಯೋದಲ್ಲಿ ಸಚಿನ್ ಅವರ ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ಸಚಿನ್ ಹೆಸರನ್ನು ಡಿಲೀಟ್ ಮಾಡಿ ಸೂ ಚಿನ್ ಎಂದು ಬರೆದು ಸೇವ್ ಮಾಡುವ ರೀತಿ ನಗೆಚಟಾಕಿ ಹಾರಿಸಿದೆ. ಈ ವಿಡಿಯೋ ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವೇ ಕ್ಷಣಗಳಲ್ಲಿ 24 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ನೆಟ್ಟಿಗರು ಕೂಡ ಟ್ರೋಲ್ ಮೂಲಕ ಹಾಸ್ಯವನ್ನು ಬೆರೆಸಿದ್ದಾರೆ. (ಏಜೆನ್ಸೀಸ್)