ನ್ಯೂಸ್

‘IC 814’ ವಿವಾದ; ಸರ್ಕಾರದಿಂದ ನೆಟ್​ಫ್ಲಿಕ್ಸ್​​ ಕಂಟೆಂಟ್​ ಹೆಡ್​ಗೆ ಸಮನ್ಸ್​​.. ಕಾರಣ ಹೀಗಿದೆ

ನವದೆಹಲಿ: ನೆಟ್​​ಫ್ಲಿಕ್​​​ನಲ್ಲಿ ಇತ್ತೀಚೆಗೆ ಸ್ಟ್ರೀಮಿಂಗ್​​ ಆದ ​​'IC 814' ಸೀರಿಸ್​​ ವಿವಾದಗಳಲ್ಲಿ ಸಿಲುಕಿಕೊಂಡಿದೆ. ನಿರ್ದೇಶಕ ಅನುಭವ್​​ ಸಿನ್ಹಾ ಅವರು ಸರಣಿಯಲ್ಲಿ ಉಗ್ರರ ಹೆಸರನ್ನು ಮರೆಮಾಚಿದ್ದಾರೆ ಎಂಬುದು ಇಷ್ಟೆಲ್ಲಾ ಗದ್ದಲಕ್ಕೆ ಕಾರಣವಾಗಿದೆ. ಈ ವಿವಾದ ಹೊಸ ತಿರುವು ಪಡೆಯುವುದ್ದಕ್ಕಿಂತ ಮುನ್ನವೇ ಎಚ್ಚೆತ್ತ ಸರ್ಕಾರ ನೆಟ್​ಫ್ಲಿಕ್ಸ್​​ನ ಇಂಡಿಯಾ ಕಂಟೆಂಟ್​ ಹೆಡ್​​​ಗೆ ಸಮನ್ಸ್​ ಜಾರಿ ಮಾಡಿದೆ.

ಇಂಡಿಯಾ ಕಂಟೆಂಟ್​ ಹೆಡ್​​​ ಮೋನಿಕಾ ಶೆರ್ಗಿಲ್​ ಅವರು ಮಂಗಳವಾರ(ಸೆಪ್ಟೆಂಬರ್​ 3) ಹಾಜರಾಗುವಂತೆ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಮನ್ಸ್​ ಜಾರಿ ಮಾಡಿದೆ. ವಿವಾದಾತ್ಮಕ ಅಂಶಗಳ ಕುರಿತು ಸ್ಪಷ್ಟೀಕರಣ ನೀಡುವಂತೆ ಕೇಳಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಈ ದೇಶದ ಜನರ ಭಾವನೆಗಳೊಂದಿಗೆ ಆಟವಾಡುವ ಹಕ್ಕು ಯಾರಿಗೂ ಇಲ್ಲ. ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಗೌರವಿಸಬೇಕು. ಯಾವುದನ್ನಾದರೂ ತಪ್ಪಾಗಿ ಚಿತ್ರಿಸುವ ಮೊದಲು ಯೋಚಿಸಬೇಕು. ಏಕೆಂದರೆ ಸರ್ಕಾರವು ಅದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ತಿಳಿಸಿವೆ.

ಇಷ್ಟೆಲ್ಲಾ ವಿವಾದಕ್ಕೆ ಕಾರಣವಾದ IC-814: ಕಂದಹಾರ್ ಹೈಜಾಕ್ ವೆಬ್ ಸರಣಿ ಆಗಸ್ಟ್ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸೀರಿಸ್​​ 1999ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ವಾಸ್ತವವಾಗಿ ನೇಪಾಳದ ಕಠ್ಮಂಡುವಿನಿಂದ ನವದೆಹಲಿಗೆ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ ಸಂಖ್ಯೆ ಐಸಿ 814 ಅನ್ನು ಭಯೋತ್ಪಾದಕರು ಹೈಜಾಕ್ ಮಾಡಿದ್ದರು. ಈ ವಿಮಾನವನ್ನು ವಿವಿಧ ಸ್ಥಳಗಳ ಮೂಲಕ ಅಫ್ಘಾನಿಸ್ತಾನದ ಕಂದಹಾರ್‌ಗೆ ಕೊಂಡೊಯ್ಯಲಾಗಿತ್ತು.

ಹೈಜಾಕ್​​ ಆಗಿದ್ದ ವಿಮಾನದಲ್ಲಿದ್ದ ಪ್ರಯಾಣಿಕರ ಪ್ರಾಣಕ್ಕೆ ಬದಲಾಗಿ ಭಯೋತ್ಪಾದಕರ ಬೇಡಿಕೆಗಳನ್ನು ಭಾರತ ಸರ್ಕಾರವು ಒಪ್ಪಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಭಾರತೀಯ ಜೈಲಿನಲ್ಲಿದ್ದ ಮೌಲಾನಾ ಮಸೂದ್ ಅಜರ್, ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಎಂಬ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡುವುದು ಈ ಬೇಡಿಕೆಗಳಲ್ಲಿ ಒಂದಾಗಿತ್ತು. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಈ ಮೂವರು ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರಿಲೀಸ್​ ಆಗಿರುವ ವೆಬ್​ ಸರಣಿಯಲ್ಲಿ ಅಪಹರಣಕಾರರು ಘಟನೆಯ ಉದ್ದಕ್ಕೂ ತಮ್ಮ ನಿಜವಾದ ಹೆಸರುಗಳ ಬದಲಿಗೆ ಕೋಡ್ ಹೆಸರನ್ನು ಬಳಸುತ್ತಾರೆ. ವರದಿ ಪ್ರಕಾರ ಅಪಹರಣಕಾರರ ನಿಜವಾದ ಹೆಸರುಗಳು ಇಬ್ರಾಹಿಂ ಅಥರ್, ಸನ್ನಿ ಅಹ್ಮದ್ ಖಾಜಿ, ಜಹೂರ್ ಇಬ್ರಾಹಿಂ, ಶಾಹಿದ್ ಅಖ್ತರ್ ಮತ್ತು ಸೈಯದ್ ಶಾಕಿರ್ ಆಗಿದೆ.ಆದರೆ ಸರಣಿಯಲ್ಲಿ ಬರ್ಗರ್, ಚೀಫ್, ಶಂಕರ್ ಮತ್ತು ಭೋಲಾ ಎಂನ ಕೋಡ್ ಹೆಸರನ್ನು ಬಳಸಿದ್ದಾರೆ.

ಇದು ಭಯೋತ್ಪಾದಕರ ಹೆಸರನ್ನು ಮರೆಮಾಚು ಪ್ರಯತ್ನವಾಗಿದೆ ಎಂಬುದು ಆರೋಪವಾಗಿದೆ. ಈ ಕಾರಣದಿಂದಾಗಿ ಜನರು ಕಾರ್ಯಕ್ರಮದ ಪ್ರತಿಭಟಿಸುತ್ತಿದ್ದು, ನೆಟ್‌ಫ್ಲಿಕ್ಸ್-ಬಾಲಿವುಡ್ ಅನ್ನು ಬಹಿಷ್ಕರಿಸಿ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​​)