ಕರಾಚಿ: ಕಳೆದ ಒಂದು ದಿನದಿಂದ ಸೋಷಿಯಲ್ ಮೀಡಿಯಾ ಸಂಪೂರ್ಣವಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷ ಸೇವಿಸಿ ಕರಾಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯಿಂದಲೇ ತುಂಬಿದೆ. ಆಸ್ಪತ್ರೆಯ ಕಟ್ಟಡದಲ್ಲಿ ಒಂದು ಮಹಡಿ ಆತನಿಗೆಂದೇ ಮೀಸಲು ಹಾಗೂ ಕೇವಲ ಆಪ್ತರಿಗೆ ಮತ್ತು ಕುಟುಂಬಸ್ಥರಿಗೆ ಮಾತ್ರ ನೋಡಲು ಪ್ರವೇಶ ಎಂದು ಹೇಳಲಾಗಿದೆ. ಈ ಸುದ್ದಿ ಎಷ್ಟು ನಿಜ ಎಂಬುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ! ಇದಕ್ಕೆ ಪೂರಕವಾಗಿ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ಇದೆಲ್ಲದರ ಮಧ್ಯೆ ನಿನ್ನೆಯಿಂದ ದಾವೂದ್ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಕುರಿತಂತೆ ಇಬ್ರಾಹಿಂ ಆಪ್ತ ಛೋಟಾ ಶಕೀಲ್ ಶಾಕಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ‘ಅನಿಮಲ್’ ಅಬ್ಬರ ಕುಸಿತ! 18ನೇ ದಿನಕ್ಕೆ ಗಳಿಸಿದ ಒಟ್ಟು ಕಲೆಕ್ಷನ್ ಎಷ್ಟು? ಇಲ್ಲಿದೆ ವಿವರ..
ಇಬ್ರಾಹಿಂ ಸಾವಿನ ಸುದ್ದಿ ವದಂತಿಗೆ ಪ್ರತಿಕ್ರಿಯಿಸಿದ ಛೋಟಾ ಶಕೀಲ್, "ಅವರು ಸಾವಿರ ಪರ್ಸೆಂಟ್ ಫಿಟ್ ಆಗಿದ್ದಾರೆ, ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಸುದ್ದಿಗಳು ತಪ್ಪಾಗಿದೆ" ಎಂದು ಹೇಳಿದರು. ದಾವೂದ್ ಪಾಕಿಸ್ತಾನದಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ಸುದ್ದಿ ಸೋಮವಾರ ದಿನವಿಡೀ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಈ ಬಗ್ಗೆ ಪಾಕಿಸ್ತಾನದಲ್ಲಿ ಇಂಟರ್‌ನೆಟ್ ಸ್ಥಗಿತದ ಚರ್ಚೆ ಮತ್ತು ದೊಡ್ಡ ಕೋಲಾಹಲ ಉಂಟಾಗಿತ್ತು. ಆದರೆ, ಇದೀಗ ಇಬ್ರಾಹಿಂ ಆಪ್ತ ಛೋಟಾ ಶಕೀಲ್ ಈ ಸುದ್ದಿಗಳು ತಪ್ಪು ಎಂದಿದ್ದಾರೆ.
ಛೋಟಾ ಶಕೀಲ್ ದಾವೂದ್‌ಗೆ ಅತ್ಯಂತ ಆಪ್ತ: "ಡಾನ್ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ತಪ್ಪಾದ ಸಾವಿನ ಸುದ್ದಿಯನ್ನು ತಪ್ಪು ಕಾರಣಗಳಿಗಾಗಿ ಕಾಲಕಾಲಕ್ಕೆ ಹರಡಲಾಗಿದೆ" ಎಂದು ಶಕೀಲ್ ಒತ್ತಿ ಹೇಳಿದ್ದಾರೆ. ಛೋಟಾ ಶಕೀಲ್ ದಾವೂದ್ ಬಲಗೈ ಬಂಟ ಎಂದು ಹೇಳಲಾಗಿದ್ದು, ಇಬ್ರಾಹಿಂ ವ್ಯವಹಾರದ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).