IB Officer Death: ಸೋಮವಾರ (ಮಾ.24) ಶವವಾಗಿ ಪತ್ತೆಯಾದ ಕೇರಳದ ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿ ಮೇಘಾ ಮಧುಸೂದನನ್ (24), ರೈಲ್ವೆ ಹಳಿ ಪಕ್ಕ ಮೃತಪಟ್ಟ ಸುದ್ದಿ ಸಂಬಂಧಿಕರನ್ನು ಅಕ್ಷರಶಃ ಬೆಚ್ಚಿಬೀಳಿಸಿತು. ಮಗಳ ಸಾವಿನ ಹಿಂದಿರುವ ಯುವಕನ ಕೈವಾಡವನ್ನು ತನಿಖೆ ಮೂಲಕ ಬಯಲಿಗೆಳೆಯಬೇಕು ಮತ್ತು ಸಾವಿನ ಸುತ್ತಲಿನ ಸಂದರ್ಭಗಳನ್ನು ಬಹಿರಂಗಪಡಿಸಲು ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಈ ವರ್ಷ ಇವರಿಗೆಲ್ಲ ಕಾದಿದೆ ಕಂಟಕ! ಸೆಲೆಬ್ರಿಟಿಗಳಿಗೆ ಜೈಲುವಾಸ ಸಂಕಷ್ಟ: ವೇಣುಸ್ವಾಮಿ ಸ್ಫೋಟಕ ಭವಿಷ್ಯ | Venuswamy
ಈ ವಾರದ ಆರಂಭದಲ್ಲಿ ಕೇರಳದ ರಾಜಧಾನಿಯಲ್ಲಿ ರೈಲ್ವೆ ಹಳಿಯ ಪಕ್ಕ ಶವವಾಗಿ ಪತ್ತೆಯಾದ ಮೇಘಾಳನ್ನು ಕಂಡು ಪೋಷಕರು ಕಣ್ಣೀರಿಟ್ಟಿದ್ದಾರೆ. ಮಗಳ ಜತೆಗೆ ಪ್ರೀತಿ ಹೆಸರಿನಲ್ಲಿ ಸಂಬಂಧ ಹೊಂದಿದ್ದ ಸಹೋದ್ಯೋಗಿಯೊಬ್ಬ ಆಕೆಯನ್ನು ಆರ್ಥಿಕವಾಗಿ ಶೋಷಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಕೆಯ ತಂದೆ ಮಧುಸೂಧನನ್ ಹೇಳಿಕೆ ಪ್ರಕಾರ, "ಮೇಘಾ ತನಗೆ ಬರುತ್ತಿದ್ದ ಮಾಸಿಕ ಸಂಬಳವನ್ನು ಆತನ ಖಾತೆಗೆ ವರ್ಗಾಯಿಸಿ, ತಾನು ಹಣವಿಲ್ಲದೆ ಪರದಾಡುತ್ತಿದ್ದಳು. ಕಳೆದ ಫೆಬ್ರವರಿ ತಿಂಗಳ ಸಂಬಳವನ್ನು ಆ ವ್ಯಕ್ತಿಯ ಖಾತೆಗೆ ವರ್ಗಾಯಿಸಿದ್ದಾಳೆ. ಅದಕ್ಕೆ ಬ್ಯಾಂಕ್ ದಾಖಲೆಯು ಇದೆ" ಎಂದು ಆರೋಪಿಸಿದ್ದಾರೆ.
"ಸಾಯುವ ಮುನ್ನ ಆಕೆಯ ಬ್ಯಾಂಕ್ ಖಾತೆಯಲ್ಲಿ ಕೇವಲ 80 ರೂ. ಮಾತ್ರ ಉಳಿದಿತ್ತು. ಇನ್ನುಳಿದ ಸಂಬಳದ ಹಣವನ್ನೆಲ್ಲ ಆಕೆಯ ಪ್ರಿಯಕರನಿಗೆ ಕಳಿಸಿ, ತಾನು ಉಪವಾಸ ಇರುತ್ತಿದ್ದಳು. ಈ ಮಾತನ್ನು ಆಕೆಯ ಸ್ನೇಹಿತರೇ ನನಗೆ ತಿಳಿಸಿದ್ದಾರೆ. ಇದು ಅತ್ಯಂತ ದುಃಖಕರ ಸಂಗತಿ" ಎಂದು ಮೇಘಾ ತಂದೆ ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷ ರಾಜಸ್ಥಾನದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮೇಘಾ ಮತ್ತು ಆಕೆಯ ಸಹೋದ್ಯೋಗಿ ನಡುವೆ ಪ್ರೇಮಾಂಕುರವಾಗಿದೆ. ಆಕೆಯ ದುರಂತ ಅಂತ್ಯದ ನಂತರ ಕುಟುಂಬಸ್ಥರು, ಮೇಘಾ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ತನ್ನ ಸಂಪೂರ್ಣ ಸಂಬಳವನ್ನು ಆತನ ಖಾತೆಗೆ ವರ್ಗಾಯಿಸಿರುವುದು ಸ್ಪಷ್ಟವಾಗಿದೆ.
ಬ್ಯಾಂಕ್ ದಾಖಲೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೆಟ್ಟಾ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ತನಿಖೆಯ ಭಾಗವಾಗಿ ಕುಟುಂಬವು ಆಕೆಯ ಲ್ಯಾಪ್‌ಟಾಪ್ ಅನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ,(ಏಜೆನ್ಸೀಸ್).