ಪ್ರಯಾಗರಾಜ್: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯನ್ನು ಖಂಡಿಸಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಕೇರಳ ಮೂಲದ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ರನ್ನು ಉತ್ತರ ಪ್ರದೇಶದ ಪ್ರಯಾಗರಾಜ್ ವಿಮಾನ ನಿಲ್ದಾಣ ಬಳಿ ನಗರ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ತಿಳಿದುಬಂದಿದೆ.
ಗೋಪಿನಾಥನ್ ಅವರು ದೆಹಲಿಯಿಂದ ಪ್ರಯಾಗರಾಜ್ಗೆ ಶನಿವಾರ ರಾತ್ರಿ ಆಗಮಿಸಿದ್ದರು. ನಾಗರಿಕತ್ವ ರಕ್ಷಣೆ, ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವ ರಕ್ಷಣೆ ವಿಷಯ ಕುರಿತು ಆಲ್ ಇಂಡಿಯಾ ಪೀಪಲ್ಸ್ ಫೋರಂ ಆಯೋಜಿಸಿದ್ದ ಎರಡು ಗಂಟೆಗಳ ವಿಚಾರಣ ಸಂಕಿರಣದಲ್ಲಿ ಭಾಗವಹಿಸಲು ಗೋಪಿನಾಥನ್ ಪ್ರಯಾಗರಾಜ್ಗೆ ಬಂದಿಳಿದಿದ್ದರು.
ಬಳಿಕ ನಡೆದ ಘಟನೆಯ ಬಗ್ಗೆ ಸರಣಿ ಟ್ವೀಟ್ ಮೂಲಕ ವಿವರಿಸಿರುವ ಗೋಪಿನಾಥನ್, ವಿಮಾನದಿಂದ ಹೊರಬಂದು ನಿರ್ಗಮನ ದ್ವಾರಕ್ಕೆ ಬರುತ್ತಿದ್ದಾಗಲೇ ಪೊಲೀಸ್ ಸಿಬ್ಬಂದಿ ನನ್ನನ್ನು ಸುತ್ತುವರಿದು ನನ್ನ ಗುರುತನ್ನು ಕೇಳಿದರು. ನಾನು ನನ್ನ ಹೆಸರನ್ನು ಹೇಳಿದೆ. ನನ್ನನ್ನು ವಿಐಪಿ ಕೊಠಡಿ ಬಳಿ ಕರೆದೊಯ್ದರು. ಬಳಿಕ ಸೆಕ್ಯುರಿಟಿ ಕೊಠಡಿ ಬಳಿ ಕರೆದೊಯ್ದರು. ನನ್ನ ಇನ್ನಿತರ ಯೋಜನೆಗಳ ಬಗ್ಗೆ ಪೊಲೀಸರು ಕೇಳಿದರು. ಅಲಹಾಬಾದ್ ಬಿಟ್ಟ ನಂತರ ಜಾರ್ಖಂಡ್ನ ಬೊಕಾರೋಗೆ ಶನಿವಾರ ರಾತ್ರಿ ದೆಹಲಿಯಿಂದ ಹೊರಡಬೇಕೆಂದು ಹೇಳಿದೆ. ಆದರೆ, ನನ್ನನ್ನು ದೆಹಲಿಗೆ ವಾಪಸ್ ಕಳುಹಿಸಿದರು ಎಂದು ಆರೋಪಿಸಿದ್ದಾರೆ.
ವಿಚಾರ ಸಂಕಿರಣ ಆಯೋಜಿಸಿದ್ದ ಕಮಲ್ ಉಸ್ರಿ ಅವರು ಪ್ರಯಾಗರಾಜ್ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಆದರೆ, ಗೋಪಿನಾಥನ್ ಅವರನ್ನು ನಾವು ವಶಕ್ಕೆ ಪಡೆದಿಲ್ಲ. ನಗರದ ವಾತಾವರಣ ಶಾಂತವಾಗಿದೆ ವಾಪಸ್ ಹೋಗುವುದು ಒಳಿತು ಎಂದು ಸಲಹೆ ನೀಡಿದೆವು. ಅವರೇ ವಾಪಸ್ಸಾದರು ಎಂದು ಪೊಲೀಸ್ ಅಧಿಕಾರಿಗಳು ಆರೋಪವನ್ನು ತಳ್ಳಿಹಾಕಿದ್ದಾರೆ.
ಸಂವಿಧಾನದ 370ನೇ ಆರ್ಟಿಕಲ್ ಅಡಿಯಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿಸಿದ ಬೆನ್ನಲ್ಲೇ ಗೋಪಿನಾಥನ್ ತಮ್ಮ ಹುದ್ದೆಯನ್ನು ತೊರೆದಿದ್ದರು. ಕೇಂದ್ರದ ನಿರ್ಧಾರ ಜಮ್ಮು ಮತ್ತು ಕಾಶ್ಮೀರ ಜನತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ವಿರೋಧಿಸಿ ಹುದ್ದೆ ತ್ಯಜಿಸಿದ್ದಾರೆ. (ಏಜೆನ್ಸೀಸ್)