ನ್ಯೂಸ್

2023ರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾದ ಐಎಎಸ್ ಬಾಬಾ ಸಂಸ್ಥೆಯ ಅಭ್ಯರ್ಥಿಗಳಿಗೆ ಸನ್ಮಾನ

Bengaluru - Political - Shivananda Tagadur

ಬೆಂಗಳೂರು:
ದೇಶಾದ್ಯಂತ ಈ ಬಾರಿ ಐಎಎಸ್ ಬಾಬಾ ಸಂಸ್ಥೆಯಿಂದ 211ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಕರ್ನಾಟಕ ರಾಜ್ಯದಿಂದ ಉತ್ತೀರ್ಣವಾಗಿರುವ 30 ಅಭ್ಯರ್ಥಿಗಳನ್ನು ಆದಿಚುಂಚನಗಿರಿ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ನೀವುಗಳು ದೇಶದ ಅತ್ಯುನ್ನತ ಪರೀಕ್ಷೆಯಾದ ಐಪಿಎಸ್‌ಸಿ ಪರಿಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಸ್ಥಾನಕ್ಕೆ ಹೋಗುವವರಿದ್ದೀರಿ, ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಎಲ್ಲಿಯೂ ಎಡವದೇ ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ಹೆಸರನ್ನು ಪಡೆಯಬೇಕು. ತಮಗೆ ಸಿಕ್ಕಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೇ ಸಮಾಜದ ಏಳಿಗೆಗಾಗಿ ಕೃಷಿ ಮಾಡಬೇಕು ಎಂದರು. ಐಎಎಸ್ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು.
ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಎಸ್ ಮೋಹನ್ ಕುಮಾರ್ ಮಾತನಾಡಿ ಐಎಎಸ್ ಉತ್ತೀರ್ಣರಾದವರು ತಾವು ಯಾರಿಗೂ ಅಡಿಯಾಳಾಗದೆ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು, ದೇಶವು ತಮ್ಮಿಂದ ಬಹಳಷ್ಟು ನಿರೀಕ್ಷೆ ಅಪೇಕ್ಷಿಸುತ್ತದೆ, ಸಾರ್ವಜನಿಕ ಸೇವೆಯಲ್ಲಿ ಅತ್ಯಾಕರ್ಷಕ ಮತ್ತು ತೃಪ್ತಿಕರ ವೃತ್ತಿ ನಿಮಗಾಗಿ ಕಾಯುತ್ತಿದೆ ಎಂದು ಹೇಳಿದರು.
ನಿಮ್ಮ ಪ್ರತಿಯೊಂದು ಒಳ್ಳೆಯ ಕೆಲಸವೂ ನಮಗೆ ಸ್ಪೂರ್ತಿ ನೀಡಿ ಇನ್ನಷ್ಟು ಒಳ್ಳೆಯ ಅಧಿಕಾರಿಗಳು ಬರಲು ತಾವು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಐಎಎಸ್ ಬಾಬಾ ಸಂಸ್ಥೆಯ ಕಠಿಣ ಪರಿಶ್ರಮದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷವೂ ಒಳ್ಳೆಯ ಫಲಿತಾಂಶ ಲಭಿಸುತ್ತಿದ್ದು ಈ ಸಂಸ್ಥೆಯು ಕನ್ನಡಿಗರಿಂದ ಸ್ಥಾಪಿತವಾದ ಕನ್ನಡಿಗರ ಸಂಸ್ಥೆಯಾಗಿದೆ ಎಂದರು.