ಕೊಯಮತ್ತೂರು: ಔಷಧಿ ತೆಗೆದುಕೊಂಡು ಮಲಗಿದ್ದ ಮಹಿಳಾ ಸಹೋದ್ಯೋಗಿಯ ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ 26 ವರ್ಷದ ಭಾರತೀಯ ವಾಯುಪಡೆ(ಐಎಎಫ್)ಯ ಫ್ಲೈಟ್ ಲೆಫ್ಟಿನೆಂಟ್ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರಿನ ರೆಡ್ಫೀಲ್ಡ್ಸ್ನಲ್ಲಿರುವ ಏರ್ ಫೋರ್ಸ್ ಅಡ್ಮಿನಿಸ್ಟ್ರೇಟೀವ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಯುವತಿಯ ದೂರಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಎರಡು ವಾರಗಳ ಹಿಂದೆ, 27 ವರ್ಷದ ಸಂತ್ರಸ್ತೆಯು ಕ್ರೀಡಾಭ್ಯಾಸದ ವೇಳೆ ಏಟು ಬಿದ್ದಿದ್ದರಿಂದ ಕಾಲೇಜಿನ ಕೊಠಡಿಯಲ್ಲಿ ಔಷಧಿ ಸೇವಿಸಿ ಮಲಗಿದ್ದಳು. ನಂತರ ಎದ್ದಾಗ ಲೈಂಗಿಕ ಶೋಷಣೆಯಾಗಿರುವುದು ತಿಳಿದುಬಂತು. ತಕ್ಷಣ ತಾನು ನೀಡಿದ ದೂರಿನ ಮೇಲೆ ಐಎಎಫ್ ತೆಗೆದುಕೊಂಡ ಕ್ರಮದ ಬಗ್ಗೆ ತೃಪ್ತಿಯಿಲ್ಲದ್ದರಿಂದ ಪೊಲೀಸರಿಗೆ ದೂರು ನೀಡಬೇಕಾಗಿದೆ ಎಂದು ದೂರಿನಲ್ಲಿ ಹೇಳಿದ್ದಾಳೆ ಎನ್ನಲಾಗಿದೆ.
ಕೊಯಮತ್ತೂರಿನ ಗಾಂಧಿಪುರಂ ಪೊಲೀಸ್ ಠಾಣೆಯ ಮಹಿಳಾ ತಂಡವು ಆರಂಭಿಕ ತನಿಖೆ ನಡೆಸಿದ ನಂತರ ಛತ್ತೀಸಗಡ ಮೂಲದ ಐಎಎಫ್ ಅಧಿಕಾರಿಯ ಮೇಲೆ ಪ್ರಕರಣ ದಾಖಲಿಸಿತು. ಆರೋಪಿಯು ಜಿಲ್ಲಾ ನ್ಯಾಯಾಧೀಶರ ಮುಂದೆ ಶರಣಾದ ನಂತರ ಆತನನ್ನು ಬಂಧಿಸಿದ್ದು, ಸದ್ಯ ಉದುಮಲಪೇಟ್ ಜೈಲಿನಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.
ಐಎಎಫ್ ಅಧಿಕಾರಿಯಾದ್ದರಿಂದ ಸೇನಾ ನ್ಯಾಯಾಲಯಕ್ಕೆ ಮಾತ್ರ ವಿಚಾರಣೆ ನಡೆಸುವ ಅಧಿಕಾರವಿರುತ್ತದೆ. ಆದ್ದರಿಂದ ಪೊಲೀಸರು ಈ ದೂರಿನ ಮೇಲೆ ಕ್ರಮ ತೆಗೆದುಕೊಳ್ಳಲು ಅಧಿಕಾರವ್ಯಾಪ್ತಿ ಇರುವುದಿಲ್ಲ ಎಂದು ಆರೋಪಿಯ ವಕೀಲರು ವಾದಿಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)