ನ್ಯೂಸ್

ಪ್ರವಾಹದ ನೀರಿನಲ್ಲೇ ಸೇನಾ ಹೆಲಿಕಾಪ್ಟರ್​ ಲ್ಯಾಂಡಿಂಗ್​! ಪೈಲಟ್​ ಜಾಣ್ಮೆಯಿಂದ ತಪ್ಪಿತು ಅನಾಹುತ

ಪಟನಾ: ಬಿಹಾರದ ಪ್ರವಾಹ ಸಂತ್ರಸ್ತರಿಗೆ ನೆರವಾಗುತ್ತಿದ್ದ ಐಎಎಫ್ ಹೆಲಿಕಾಪ್ಟರ್‌ ( IAF chopper ) ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಪೈಲಟ್​ ತುಂಬಾ ಜಾಣ್ಮೆಯಿಂದ ಪ್ರವಾಹದ ನೀರಿನಲ್ಲಿ ಚಾಪರ್​ ಅನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಮೂಲಕ ಸಂಭವನೀಯ ಅಪಾಯವೊಂದನ್ನು ತಪ್ಪಿಸಿದ್ದಾರೆ.

ಚಾಪರ್​ ಲ್ಯಾಂಡ್​ ಆದ ಬೆನ್ನಲ್ಲೇ ಸ್ಥಳೀಯರು ದೋಣಿಯ ಸಹಾಯದಿಂದ ಹತ್ತಿರ ಹೋಗಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಐಎಎಫ್ ಸಿಬ್ಬಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಿಹಾರದಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಇದರಿಂದಾಗಿ ಲಕ್ಷಾಂತರ ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಕನಿಷ್ಠ ಸೌಕರ್ಯಗಳಿಲ್ಲದೆ ಪ್ರವಾಹ ಸಂತ್ರಸ್ತರು ಹೆಣಗಾಡುತ್ತಿದ್ದಾರೆ. ಹೀಗಾಗಿ ಬಿಹಾರದ ಸರ್ಕಾರ ಹೆಲಿಕಾಪ್ಟರ್ ಸಹಾಯದಿಂದ ಸಂತ್ರಸ್ತರಿಗೆ ಆಹಾರ, ನೀರು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸುತ್ತಿದೆ.

ಇಂದು (ಅ. 02) ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಮೂಲಕ ಪರಿಹಾರ ಸಾಮಗ್ರಿಗಳನ್ನು ತಲುಪಿಸುವಾಗ, ಇಂಜಿನ್​ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಮಧ್ಯಾಹ್ನದ ವೇಳೆ ಚಾಪರ್​ ಅನ್ನು ಪ್ರವಾಹದ ನೀರಿನ ಮೇಲೆಯೇ ಪೈಲಟ್ ಲ್ಯಾಂಡ್ ಮಾಡಬೇಕಾಯಿತು. ಹೆಲಿಕಾಪ್ಟರ್ ದರ್ಭಾಂಗಾ ವಾಯುನೆಲೆಯಿಂದ ಹೊರಟು ಮುಜಾಫರ್‌ಪುರದ ನಯಾಗಾಂವ್‌ನಲ್ಲಿ ಇಳಿಯಿತು. ಲ್ಯಾಂಡಿಂಗ್ ನಂತರ ಹೆಲಿಕಾಪ್ಟರ್‌ನ ಒಂದು ಭಾಗವು ಪ್ರವಾಹದ ನೀರಿನಲ್ಲಿ ಮುಳುಗಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ಮಾತನಾಡಿ, ಪೈಲಟ್‌ನ ಜಾಣತನದಿಂದ ಭಾರೀ ಅನಾಹುತ ತಪ್ಪಿದೆ. ಇಂಜಿನ್ ವಿಫಲವಾದಾಗ ವೀಕ್ಷಕರು ಹೆಲಿಕಾಪ್ಟರ್ ಅನ್ನು ಆಳವಿಲ್ಲದ ನೀರಿನಲ್ಲಿ ಇಳಿಸಲು ಪೈಲಟ್‌ಗೆ ಸೂಚಿಸಿದರು. ಅಪಘಾತ ಸಂಭವಿಸಿದ ತಕ್ಷಣ ಸಿಬ್ಬಂದಿಯನ್ನು ರಕ್ಷಿಸಿ, ಆಸ್ಪತ್ರೆಗೆ ಸಾಗಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅಮೃತ್ ಹೇಳಿದರು. (ಏಜೆನ್ಸೀಸ್​)