ಪಾಕಿಸ್ತಾನದ ಅಣು ಭದ್ರತಾ ವ್ಯವಸ್ಥೆ ಸಮರ್ಪಕವಾಗಿದೆ ಎಂದ ಐಎಇಎ
ಸೆಪ್ಟೆಂಬರ್ 28ರಿಂದ ಅಕ್ಟೋಬರ್ 9ರವರೆಗೆ 12 ದಿನಗಳ ಪರಿಶೀಲನೆ
ಅಣು ಭದ್ರತೆ ಮತ್ತಷ್ಟು ಬಲಪಡಿಸಲು ಐಎಇಎ ಶಿಫಾರಸು
Pakistan nuclear security: ಪಾಕಿಸ್ತಾನದ ಅಣು ವಸ್ತುಗಳು ಮತ್ತು ಅಣು ಸ್ಥಾವರಗಳ ಭದ್ರತಾ ವ್ಯವಸ್ಥೆ ಸಮರ್ಪಕವಾಗಿದೆ ಎಂದು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ತಿಳಿಸಿದೆ. ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ನಡೆಸಿದ 12 ದಿನಗಳ ಪರಿಶೀಲನೆ ಬಳಿಕ ಈ ಮಾಹಿತಿ ಹೊರಬಿದ್ದಿದೆ.
ಸೆಪ್ಟೆಂಬರ್ 28ರಿಂದ ಅಕ್ಟೋಬರ್ 9ರವರೆಗೆ ನಡೆದ ಪರಿಶೀಲನೆಯಲ್ಲಿ ಏಳು ಸದಸ್ಯರ ಐಎಇಎ ತಂಡವು ಅಣು ಭದ್ರತೆಗೆ ಸಂಬಂಧಿಸಿದ ಕಾನೂನುಗಳು, ನಿಯಂತ್ರಣ ವ್ಯವಸ್ಥೆ ಮತ್ತು ಸ್ಥಾವರಗಳಲ್ಲಿನ ರಕ್ಷಣಾ ಕ್ರಮಗಳನ್ನು ಪರಿಶೀಲಿಸಿದೆ. ಪಾಕಿಸ್ತಾನದ ಅಣು ನಿಯಂತ್ರಣ ಪ್ರಾಧಿಕಾರ (ಪಿಎನ್‌ಆರ್‌ಎ) ಈ ಕಾರ್ಯಾಚರಣೆಗೆ ಆತಿಥ್ಯ ವಹಿಸಿತ್ತು.
ತಂಡವು ಕರಾಚಿಯ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿರುವ ಕೆಎಎನ್‌ಯುಪಿಪಿ ಸ್ಥಾವರಕ್ಕೆ ಭೇಟಿ ನೀಡಿ, ಅದನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಮತ್ತು ಬಳಸಿದ ಅಣು ಇಂಧನದ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಿದೆ. ಪಾಕಿಸ್ತಾನದ ಮೊದಲ ಅಣು ವಿದ್ಯುತ್ ಸ್ಥಾವರ 1971ರಲ್ಲಿ ಕಾರ್ಯಾರಂಭ ಮಾಡಿದ್ದು, 2021ರಲ್ಲಿ ಶಾಶ್ವತವಾಗಿ ಸ್ಥಗಿತಗೊಂಡಿತ್ತು.
ಪಾಕಿಸ್ತಾನದ ಅಣು ಭದ್ರತಾ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗುರುತಿಸಿರುವ ಐಎಇಎ, ಅದನ್ನು ಮತ್ತಷ್ಟು ಬಲಪಡಿಸಲು ಕೆಲವು ಶಿಫಾರಸುಗಳನ್ನೂ ನೀಡಿದೆ. ಪರಿಶೀಲನೆಯಲ್ಲಿ ಉತ್ತಮ ಭದ್ರತಾ ಕ್ರಮಗಳು ಕಂಡುಬಂದಿವೆ ಎಂದು ಸಂಸ್ಥೆ ತಿಳಿಸಿದೆ. ಮೊರಾಕೊದ ಅಣು ಸುರಕ್ಷತಾ ಸಂಸ್ಥೆಯ ಮಾಜಿ ಮುಖ್ಯಸ್ಥ ಖಮ್ಮರ್ ಮ್ರಾಬಿಟ್ ತಂಡದ ನೇತೃತ್ವ ವಹಿಸಿದ್ದರು. ಚೀನಾ, ರೊಮೇನಿಯಾ, ರಷ್ಯಾ ಮತ್ತು ಸ್ಲೋವಾಕಿಯಾದ ತಜ್ಞರೂ ತಂಡದಲ್ಲಿದ್ದರು.
1995ರಲ್ಲಿ ಆರಂಭವಾದ ಐಪಿಪಿಎಎಸ್ (IPPAS) ಕಾರ್ಯಕ್ರಮದ ಅಡಿಯಲ್ಲಿ ನಡೆದ 112ನೇ ಪರಿಶೀಲನೆ ಇದಾಗಿದೆ. ಅಣು ಮತ್ತು ವಿಕಿರಣಶೀಲ ವಸ್ತುಗಳ ರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಈ ಕಾರ್ಯಕ್ರಮ ದೇಶಗಳಿಗೆ ತಜ್ಞರ ಸಲಹೆ ನೀಡುತ್ತದೆ.(ಏಜೆನ್ಸೀಸ್)