ಹೂವಿನಹಡಗಲಿಯಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ಕೃಷ್ಣನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಇಒ ಮಹೇಶ್ ವಿ.ಪೂಜಾರ್ ಇತರರಿದ್ದರು. 
ನ್ಯೂಸ್

ಗುರುಗಳು ಕೈ ಹಿಡಿದು ಕಲಿಸದಿದ್ದರೆ ನಾನು ಶಾಸಕನಾಗುತ್ತಿರಲಿಲ್ಲ

ಹೂವಿನಹಡಗಲಿ: ನಮ್ಮ ಕುಟುಂಬದ ಬಡತನದಿಂದಾಗಿ ನಾನು ಶಾಲೆಗೆ ತೆರಳುವ ಬದಲು ಕೂಲಿ ಕೆಲಸಕ್ಕೆ ತೆರಳುತ್ತಿದ್ದೆ. ಶಾಲೆಗೆ ಕಳುಹಿಸಿ ಎಂದು ಶಿಕ್ಷಕರು ನನ್ನ ತಂದೆಗೆ ತಿಳಿಹೇಳದಿದ್ದರೆ ನಾನು ಶಿಕ್ಷಣ ಪಡೆಯುತ್ತಿರಲಿಲ್ಲ. ಇಂದು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಕರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನಾಡಿದರು.

ಪ್ರಸ್ತುತ ದಿನಗಳಲ್ಲಿ ಜಗತ್ತು ದಿನದಿಂದ ದಿನಕ್ಕೆ ಬದಲಾವಣೆ ಹೊಂದುತ್ತಿದ್ದು ಅದಕ್ಕೆ ಮೂಲ ಕಾರಣ ಶಿಕ್ಷಕರಾಗಿದ್ದಾರೆ. ಕಪ್ಪು ಹಲಗೆ ಮತ್ತು ಬಿಳಿ ಹಾಳೆಯ ಮೇಲೆ ಅಕ್ಷರ ಬರೆಯುವುದನ್ನು ಕಲಿಸುವ ಮೂಲಕ ನಮ್ಮ ಬದುಕನ್ನು ಸುಂದರಗೊಳಿಸಿದವರು ಶಿಕ್ಷಕರು. ತಾಲೂಕಿನ ಅನೇಕ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಹೆಚ್ಚಾಗಿದೆ. ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಮರು ನಿರ್ಮಾಣಕ್ಕೆ ಕ್ರಮವಹಿಸಲಾಗುವುದು.

ನರೇಗಾ ಯೋಜನೆ ಮತ್ತು ಇತರ ಅನುದಾನ ಬಳಸಿ ಶಾಲೆಗಳ ಆವರಣದಲ್ಲಿ ಇಕೋಪಾರ್ಕ್, ಕಾಂಪೌಂಡ್ ನಿರ್ಮಿಸಲಾಗುವುದು. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದ ಅವರು, ಗುರುಭವನ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

ಬಿಇಒ ಮಹೇಶ್.ವಿ.ಪೂಜಾರ್ ಮಾತನಾಡಿ, ಗುರುವಿನ ಶಕ್ತಿಯನ್ನು ಸ್ವೀಕರಿಸಿ ಅದನ್ನು ಅನುಭವಿಸುವವರಿಲ್ಲದಿದ್ದರೆ ಅದು ಅಶಕ್ತ ಎಂದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಯಿತು. ಜಿಪಂ ಯೋಜನಾ ನಿರ್ದೇಶಕ ಅಶೋಕ ತೋಟದ, ತಹಸೀಲ್ದಾರ್ ಕಾರ್ತಿಕ್.ವಿ, ತಾಪಂ ಇಒ ಡಾ.ಜಯರಾಮ್ ಎಂ.ಚವ್ಹಾಣ್, ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ ಇತರರಿದ್ದರು.