ನ್ಯೂಸ್

ಇದಕ್ಕಾಗಿ ಇಷ್ಟು ದಿನ ಸುಮ್ಮನಿದ್ದೆ! ಕಡೆಗೂ ವದಂತಿಗಳ ಕುರಿತು ಮೌನಮುರಿದ ದಿವ್ಯಭಾರತಿ | DivyaBharathi

ಮೋಹನ್​ ಶೆಟ್ಟಿ

DivyaBharathi: ಕಳೆದ ವರ್ಷ ಜನಪ್ರಿಯ ಮ್ಯೂಸಿಕ್ ಕಂಪೋಸರ್​ ಜಿವಿ ಪ್ರಕಾಶ್ ಕುಮಾರ್ ಮತ್ತು ಪತ್ನಿ ಸೈಂಧವಿ ದೂರಾದ ಬೆನ್ನಲ್ಲೇ, ಅವರಿಬ್ಬರ ವಿಚ್ಛೇದನದ ಹಿಂದಿನ ಕಾರಣದ ಬಗ್ಗೆ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​, ಆರೋಪಗಳು ಸೇರಿದಂತೆ ದೊಡ್ಡ ಮಟ್ಟದ ಊಹಾಪೋಹಗಳು ಕೇಳಿಬಂದವು. ಈ ವಿಷಯ ತಿಳಿದ ಅವರ ಅಭಿಮಾನಿಗಳು ತೀವ್ರ ಬೇಸರ ಹೊರಹಾಕಿದರು. ಭಾರೀ ಊಹಾಪೋಹಗಳ ಮಧ್ಯೆ ನಟಿ ದಿವ್ಯಭಾರತಿಯತ್ತ ಬೆರಳು ಮಾಡಿದ ನೆಟ್ಟಿಗರು, ಪ್ರಕಾಶ್​ ದಾಂಪತ್ಯ ಬಿರುಕು ಮೂಡಲು ಕಾರಣ ದಿವ್ಯ ಎಂದು ದೂರಿದ್ದರು. ಈ ಆರೋಪಕ್ಕೆ ಕಡೆಗೂ ನಟಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ತನ್ನ ವಿರುದ್ಧ ಸರಣಿ ಆರೋಪ, ವದಂತಿಗಳು ಕೇಳಿಬಂದರೂ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸದ ದಿವ್ಯ, ಕಡೆಗೂ ತಮ್ಮ ಜಾಲತಾಣದ ಖಾತೆಯಲ್ಲಿ ಇದಕ್ಕೆಲ್ಲ ಸ್ಪಷ್ಟನೆ ಕೊಡುವ ಮೂಲಕ ತೆರೆ ಎಳೆದಿದ್ದಾರೆ. "ಜಿವಿ ಪ್ರಕಾಶ್​ ಅವರ ವೈಯಕ್ತಿಕ ಬದುಕಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಸುಖಾಸುಮ್ಮನೆ ನನ್ನನ್ನು ಎಳೆದು ತರಲಾಗುತ್ತಿದೆ. ಆಧಾರರಹಿತ ಆರೋಪಗಳು ಖಂಡನೀಯ. ಅಸಲಿಗೆ ನಾನು ಯಾರೊಂದಿಗೂ ಡೇಟಿಂಗ್ ಮಾಡ್ತಿಲ್ಲ. ನನಗೆ ನಟರೊಂದಿಗೆ ಡೇಟಿಂಗ್ ಮಾಡುವ ಆಸಕ್ತಿಯೇ ಇಲ್ಲ" ಎಂದು ಕಡ್ಡಿ ತುಂಡಾದಂತೆ ಹೇಳಿದರು.

"ನಟನನ್ನು ಡೇಟಿಂಗ್ ಮಾಡುವ ಆಸಕ್ತಿ ಕಿಂಚಿತ್ತು ಇಲ್ಲ. ಅದರಲ್ಲೂ ಓರ್ವ ಮದುವೆಯಾದ ಪುರುಷನನ್ನು ಡೇಟಿಂಗ್ ಮಾಡುವುದಂತೂ ಸಾಧ್ಯವೇ ಇಲ್ಲ.​ ಮೊದಲಿಗೆ ಇಂತಹ ವದಂತಿಗಳು ಹರಿದಾಡಿದಾಗ ಇಲ್ಲಿ ನನ್ನ ಪ್ರತಿಕ್ರಿಯೆ ಅವಶ್ಯಕತೆಯಿಲ್ಲ ಎಂದು ಸುಮ್ಮನಿದ್ದೆ. ಇದಕ್ಕಾಗಿ ನಾನು ಇಲ್ಲಿಯವರೆಗೂ ಏನ್ನನ್ನು ಹೇಳಲು ಬಯಸಲಿಲ್ಲ. ಆದರೆ, ಈ ವಿಚಾರ ಬಹಳ ದೂರ ಹೋದ ಕಾರಣ ನಾನು ಪ್ರತಿಕ್ರಿಯೆ ನೀಡಲೇಬೇಕು ಎಂದು ನಿರ್ಧರಿಸಿದೆ" ಎಂದು ಹೇಳಿದ್ದಾರೆ.

ವದಂತಿಗೇನು ಕಾರಣ?

2021ರ 'ಬ್ಯಾಚುಲರ್' ಚಿತ್ರದಲ್ಲಿ ಜಿವಿ ಪ್ರಕಾಶ್ ಜತೆಗೆ ದಿವ್ಯ ಕೆಲಸ ಮಾಡಿದ್ದರು. ಇದನ್ನೇ ಮುಂದಿಟ್ಟು ಟ್ರೋಲ್, ಆರೋಪಕ್ಕೆ ಬಳಸಿಕೊಂಡ ನೆಟ್ಟಿಗರು, ಪ್ರಕಾಶ್​ ಸಂಬಂಧ ಮುರಿದು ಬೀಳಲು ದಿವ್ಯ ಕಾರಣ ಎಂದು ಹೇಳಿದರು. ಇದು ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಈ ಹಿಂದೆ ಜಿವಿ ಪ್ರಕಾಶ್ ಮತ್ತು ದಿವ್ಯಭಾರತಿ ಇಬ್ಬರೂ ಇಂತಹ ವದಂತಿಗಳನ್ನು ತಳ್ಳಿಹಾಕಿದ್ದರು. ಆದರೂ, ಗುಸುಗುಸು-ಪಿಸುಪಿಸು ಮಾತ್ರ ಮುಗಿಯಲಿಲ್ಲ. ಅಂತಿಮವಾಗಿ ಮತ್ತೇ ಖುದ್ದಾಗಿ ಸ್ಪಷ್ಟನೆ ನೀಡಿದ ದಿವ್ಯ, ಇದೆಲ್ಲ ಶುದ್ಧ ಸುಳ್ಳು ಎಂದು ಖಡಕ್ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).