ನವದೆಹಲಿ: ಕಳೆದ ಜನವರಿಯಲ್ಲಿ ಆಸ್ಟ್ರೇಲಿಯಾದ ಹಲವೆಡೆ ಭಾರಿ ಕಾಡ್ಚಿಚ್ಚು ವ್ಯಾಪಿಸಿತ್ತು. ಈ ಕಾರಣದಿಂದಾಗಿಯೇ ಅಲ್ಲಿನ ಪ್ರಧಾನಮಂತ್ರಿ ಸ್ಕಾಟ್ ಮಾರಿಸಸ್ ಭಾರತ ಭೇಟಿ ರದ್ದಾಗಿತ್ತು.
ಪ್ರಸ್ತುತ, ಜೂನ್ 4ರಂದು ಭಾರತ- ಆಸ್ಟ್ರೇಲಿಯಾ ಪ್ರಧಾನಿಗಳ ನಡುವೆ ಸಭೆ ನಿಗದಿಯಾಗಿದೆ. ಎರಡೂ ದೇಶಗಳ ಆರ್ಥಿಕ ಹಾಗೂ ಇತರ ವಲಯಗಳ ನಡುವಿನ ಸಂಬಂಧವನ್ನು ವೃದ್ಧಿಸಲು ಪ್ರಧಾನಿ ಮೋದಿ ಜತೆಗೆ ಸ್ಕಾಟ್ ಮಾರಿಸನ್ ಮಾತುಕತೆ ನಡೆಸಲಿದ್ದಾರೆ.
ಕರೊನಾ ಕಾರಣದಿಂದಾಗಿ ಈ ಸಭೆ ವಿಡಿಯೋ ಕಾನ್ಫರೆನ್ಸ್ ಆಗಿರಲಿದೆ. '....ಅಯ್ಯೋ ಭೇಟಿ ಸಾಧ್ಯವಾಗಿದ್ದರೆ, ಮೋದಿಯೊಂದಿಗೆ ಖಂಡಿತ ಹಂಚಿಕೊಳ್ಳುತ್ತಿದೆ ಎಂದು ಸ್ಕಾಟ್ ಮಾರಿಸನ್ ಪರಿತಪಿಸಿದ್ದಾರೆ. ಇಷ್ಟಕ್ಕೂ ಮಾರಿಸನ್ ಮೋದಿಗೆ ಕೊಡಬೇಕು ಎಂದಿದ್ದಾದರೂ ಏನು?
ಭಾನುವಾರ ಸ್ಕಾಟ್ ಮಾರಿಸನ್ ಭಾರತೀಯ ಖಾದ್ಯ ಸಮೋಸಾ ತಯಾರಿಸಿದ್ದಾರೆ. ಜತೆಗೆ, ಮಾವಿನಕಾಯಿ ಚಟ್ನಿ ಕೂಡ ಮಾಡಿದ್ದಾರೆ. ಇದರ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ತಾವೇ ತಯಾರಿಸಿದ ಖಾದ್ಯಕ್ಕೆ ಸ್ಕೊಮಾಸಾ ಎಂದು ನಾಮಕರಣ ಮಾಡಿದ್ದಾರೆ.
'ಸ್ಕೊಮೊಸಾ... ಮಾವಿನ ಕಾಯಿ ಚಟ್ನಿಯೊಂದಿಗೆ... ಅದೂ ಕೂಡ ತಿರುಳಿನಿಂದ ತಯಾರಿಸಿದ್ದು, ದುರಾದೃಷ್ಟವೆಂದರೆ ಈ ವಾರ ನರೇಂದ್ರ ಮೋದಿ ಅವರೊಂದಿಗೆ ನನ್ನ ಮೀಟಿಂಗ್ ವಿಡಿಯೋ ಲಿಂಕ್ ಮೂಲಕ ನಡೆಯಲಿದೆ. ಅವರು ಸಸ್ಯಾಹಾರಿ. ಅವರೊಂದಿಗೆ ಇವನ್ನು ಹಂಚಿಕೊಳ್ಳಲು ಖಂಡಿತ ಇಷ್ಟಪಡುತ್ತಿದ್ದೆ.' ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಅದನ್ನು ಮೋದಿಗೆ ಖಾತೆಗೂ ಟ್ಯಾಗ್ ಮಾಡಿದ್ದಾರೆ.
ಕೋವಿಡ್ ಕಾಲದಲ್ಲಿ ಭಾರತದ ಮೊದಲ ದ್ವಿಪಕ್ಷೀಯ ಮಾತುಕತೆಗಳು ಇದೇ ಪ್ರಥಮ ಬಾರಿಗೆ ವಿಡಿಯೋ ಸಂವಾದದ ಮೂಲಕ ನಡೆಯುತ್ತಿದೆ.