ನ್ಯೂಸ್

ನಾನು ಸುಮ್ಮನೇ ಮನೆಯಲ್ಲಿ ಕೂರುವುದಿಲ್ಲ; ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ: ದೇವೇಗೌಡ

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಜೆಡಿಎಸ್ ಉಳಿಸುವ ಸಂಕಲ್ಪ ಮಾಡಿದ್ದೇನೆ. ನಾನು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ. ಪಕ್ಷ ಸಂಘಟಿಸು ಕೆಲಸ ಮಾಡುತ್ತಿದ್ದೇವೆ. ಸೆಪ್ಟಂಬರ್ 10ರಂದು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿದೆ ಎಂದು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 20 ಸಾವಿರ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಅದಕ್ಕಾಗಿ ಎಲ್ಲ ಜಿಲ್ಲೆಗಳಿಂದ ಕಾರ್ಯಕರ್ತರು ಬರಬೇಕೆಂದು ಮನವಿ ಮಾಡಿದರು.

91ರ ವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದೇನೆ. ಯಾರೂ ನನ್ನನ್ನು ಈ ಸಂದರ್ಭದಲ್ಲಿ ಕೈಬಿಡಬೇಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಪಕ್ಷದ ಸಂಘಟನೆ ದೃಷ್ಟಿಯಿಂದ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಮಾಜಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ರಚನೆ ಮಾಡಲಾಗಿದ್ದು, ಸೆಪ್ಟೆಂಬರ್ 1ರಿಂದ ಅವರ ತಂಡ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದೆ ಎಂದು ತಿಳಿಸಿದರು.

ಈ ದೇಶದ ರಾಜಕಾರಣ ಹೇಗೆ ನಡೆಯುತ್ತಿದೆ ಎಂದು ನನಗೆ ಗೊತ್ತಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ತುಳಿಯುತ್ತಿದ್ದಾರೆ. ದೇವೆಗೌಡರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ ಎಂದು ತಿಳಿಯಬೇಡಿ. ಕುಮಾರಸ್ವಾಮಿಯವರು ಎಲ್ಲ ಕಡೆ ಓಡಾಡಬೇಕಾಗುತ್ತದೆ. ಅವರ ನಾಯಕತ್ವದಲ್ಲಿಯೇ ಪಕ್ಷ ಮುನ್ನಡೆಯಲಿದೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕೋರ್ ಕಮಿಟಿ ಸದಸ್ಯರ ವಿಶ್ವಾಸಕ್ಕೆ ಪಡೆದು ಒಂದು ತೀರ್ಮಾನ ಮಾಡುತ್ತೇವೆ. ಯಾವುದೇ ತೀರ್ಮಾನ ಆಗಲಿ ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ ಎಂದರು.

ದೀಪ ಬೆಳಗಿದ ಮಾಜಿ ಪ್ರಧಾನಿಗಳು

ನಮ್ಮ ಗುರಿ ಪ್ರಾದೇಶಿಕ ಪಕ್ಷ ಉಳಿಸುವುದು. ಇಂದು ಒಳ್ಳೆಯ ದಿನ, ಅದಕ್ಕೆ ಸಾಂಕೇತಿಕವಾಗಿ ಪಕ್ಷ ಸಂಘಟನೆ ಕಾರ್ಯಕ್ರಮ ಆರಂಭ ಮಾಡುತ್ತಿದ್ದೇವೆ ಎಂದು ಮಾಧ್ಯಮ ಗೋಷ್ಠಿಗೆ ಮುನ್ನ ದೇವೇಗೌಡರು ದೀಪ ಬೆಳಗಿದರು.

ಪಕ್ಷದ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಬಿ.ಎಂ. ಫಾರೂಕ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಾ ಖಾನ್, ಪಕ್ಷದ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ಸಯ್ಯದ್ ಶಫಿ ಉಲ್ಲಾ, ಬಸವರಾಜ್ ಪಾದಯಾತ್ರಿ ಮುಂತಾದವರು ಹಾಜರಿದ್ದರು.