ಮುಂಬೈನಿಂದ ತೀರ್ಥಹಳ್ಳಿ ತಾಲೂಕಿನ ಸ್ವಗ್ರಾಮಕ್ಕೆ ಕಳ್ಳ ಮಾರ್ಗದಲ್ಲಿ ಬಂದಿರುವ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ಬದಲು ದೇವಸ್ಥಾನಕ್ಕೆ ಹೋಗಿ ಹರಕೆ ಹೊತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಮುಂಬೈನಿಂದ ಬಂದಿದ್ದ ಈ ವ್ಯಕ್ತಿ ತನಗೆ ಕರೊನಾ ಸೋಂಕು ತಗುಲಿದೆಯಾ ಇಲ್ಲವಾ ಎಂಬುದನ್ನು ಖಚಿತಪಡಿಸಿಕೊಳ್ಳಲು ದೇವಸ್ಥಾನಕ್ಕೆ ಹೋಗಿದ್ದಾನೆ!
ಈ ದೇವಸ್ಥಾನದಲ್ಲಿ ಪ್ರಶ್ನೆ ಕೇಳುವ ಪದ್ಧತಿ ಇದ್ದು, ಅದಕ್ಕೆ ದೇವರೇ ಉತ್ತರ ನೀಡುತ್ತಾರೆ ಎಂಬ ನಂಬಿಕೆ ಇದೆ. ಇಂತಹ ನಂಬಿಕೆ ಮೊದಲಿನಿಂದಲೂ ಇಲ್ಲಿನ ಜನರಲ್ಲಿ ಬೆಳೆದುಬಂದಿದೆ. ಹೀಗಾಗಿ ಮುಂಬೈನಿಂದ ಬಂದಿದ್ದ ಈ ವ್ಯಕ್ತಿ ದೇವಸ್ಥಾನದಲ್ಲಿ ಪ್ರಶ್ನೆ ಕೇಳಲು ಹೋಗಿದ್ದ. ‘ನನಗೆ ಕರೊನಾ ಬಂದಿದೆಯಾ’ ಅಲ್ಲಿದ್ದ ದೇವರಿಗೆ ಅರ್ಚಕರ ಮೂಲಕ ಪ್ರಶ್ನೆ ಕೇಳಿದ್ದ ಎಂದು ಗೊತ್ತಾಗಿದೆ.
ಮನಸ್ಸಿನಲ್ಲಿ ತನಗೇ ಇಷ್ಟೆಲ್ಲ ಅನುಮಾನ ಇದ್ದರೂ ಈ ವ್ಯಕ್ತಿ ಸುಮ್ಮನೆ ಮನೆಯಲ್ಲೂ ಇರಲಿಲ್ಲ. ತನ್ನ ಸ್ನೇಹಿತ, ಆಟೋ ಚಾಲಕನೊಂದಿಗೆ ತೀರ್ಥಹಳ್ಳಿ ಪಟ್ಟಣದಲ್ಲಿ ಸುತ್ತಾಡಿದ್ದಾನೆ. ತಾಲೂಕು ಕಚೇರಿಗೆ ಆಟೋದಲ್ಲಿ ಬಂದಿದ್ದ ಆತ ನಂತರ ತೀರ್ಥಹಳ್ಳಿಯಲ್ಲಿ ಔಷಧಿ, ಬೇಕರಿ ತಿನಿಸು ಮತ್ತು ತರಕಾರಿ ಖರೀದಿಸಿದ್ದಾನೆ. ಸೋಂಕಿತನ ಸಂಪರ್ಕದಲ್ಲಿದ್ದ ಆಟೋ ಚಾಲಕ ಸ್ನೇಹಿತರೊಂದಿಗೆ ಕ್ರಿಕೆಟ್ ಕೂಡ ಆಡಿದ್ದ. ಸೋಂಕಿತ ವ್ಯಕ್ತಿ ದೈವದ ಹರಕೆ ತೀರಿಸಲು ತಾಲೂಕಿನ ಹಳ್ಳಿಯೊಂದಕ್ಕೂ ಹೋಗಿದ್ದ ಎನ್ನಲಾಗಿದೆ.
ಸೋಂಕಿತನ ಸಂಪರ್ಕದಲ್ಲಿದ್ದ ಆಟೋ ಚಾಲಕ ಸಹ ಕಳೆದ ನಾಲ್ಕೈದು ದಿನದಲ್ಲಿ ಹಲವಾರು ಕಡೆ ಸುತ್ತಾಡಿದ್ದು 300ರಿಂದ 400 ಜನ ಈತನ ಸಂಪರ್ಕಕ್ಕೆ ಬಂದಿದ್ದಾರೆ. ಒಂದು ವೇಳೆ ಈತನಿಗೆ ಸೋಂಕು ದೃಢವಾದರೆ ತೀವ್ರ ಸಮಸ್ಯೆಯಾಗುವ ಶಂಕೆ ಇದೆ.
ಗುರುವಾರ ಪತ್ತೆಯಾಗಿರುವ ಈ ಕರೊನಾ ಸೋಂಕಿತ ಮುಂಬೈನಿಂದ ಚನ್ನಗಿರಿಗೆ ಆಂಬ್ಯುಲೆನ್ಸ್‌ನಲ್ಲಿ, ಅಲ್ಲಿಂದ ಶಿವಮೊಗ್ಗಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದಾನೆ. ಶಿವಮೊಗ್ಗದಿಂದ ಊರಿಗೆ ಸಂಬಂಧಿಕರು ಸ್ವಂತ ವಾಹನದಲ್ಲಿ ಕರೆದುಕೊಂಡು ಬಂದಿದ್ದಾರೆ. ಚನ್ನಗಿರಿಯಲ್ಲಿ ಊಟ ಮಾಡುವ ಸಂದರ್ಭದಲ್ಲಿ ಮುಂಬೈನಿಂದ ಬಂದಿರುವ ವಿಷಯ ತಿಳಿದ ಜನ, ಕೆಂಪು ವಲಯದಿಂದ ಬಂದಿರುವ ವ್ಯಕ್ತಿ ಎಂಬ ಕಾರಣಕ್ಕೆ ಗಲಾಟೆ ಮಾಡಿದ್ದಾರೆ.
ಸೋಂಕಿತನ ಪತ್ನಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದು, ನೂರಾರು ಜನ ಕಾರ್ಮಿಕರ ಜತೆ ಕೆಲಸ ಮಾಡಿದ್ದಾಳೆ. ಹೀಗಾಗಿ ಇವರ ಸಂಪರ್ಕಕ್ಕೆ ಬಂದವರನ್ನೆಲ್ಲ ಕ್ವಾರಂಟೈನ್‌ಗೆ ದೂಡುವ ಅನಿವಾರ್ಯತೆ ಈಗ ಎದುರಾಗಿದೆ.